ಸೋಮವಾರ, ಏಪ್ರಿಲ್ 25, 2016

ಇತಿಹಾಸ ನೆನಪಿಸುವ ರೇಡಿಯೋ ಟವರ್


ಹಿಂದೊದು ಕಾಲವಿತ್ತು.. ಆಗ ಮನೆ ಮಂದಿಗೆ ಬೆಳಗಾಗುತ್ತಿದ್ದದ್ದು ಆಕಾಶವಾಣಿಯ ಸುಮಧುರ ಹಿನ್ನೆಲೆ ಸಂಗೀತದಿಂದ.. ಸಂಸ್ಕೃತ ವಾರ್ತೆಯ ಸಂಸ್ಕೃತ ವಾರ್ತಾ ಶ್ರುಯಂತಾಮ್ ಪ್ರವಾಚಕ ಬಲದೇವಾನಂದ ಸಾಗರಃ, ಧಾರವಾಡ ಕೇಂದ್ರದ ಪ್ರದೇಶ ಸಮಾಚಾರದ ವಾರ್ತೆಗಳು.. ಓದುತ್ತಿರುವವರು ಚಾಮರಾಜ್.. ಮುಂತಾದ ಮಧುರ ಧ್ವನಿಗಳನ್ನು ಕೇಳಿ ಜನ ತಮ್ಮ ದಿನವನ್ನಾರಂಭಿಸುತ್ತಿದ್ದರು. ರಸವಾರ್ತೆ, ಕೋರಿಕೆ, ಕೃಷಿರಂಗ, ವನಿತಾವಾಣಿ, ಯುವವಾಣಿ ಹೀಗೆ ಜನಪ್ರಿಯ ಕಾರ್ಯಕ್ರಮಗಳನ್ನು ಕೇಳಿ ಖುಷಿಪಡುತ್ತಿದ್ದರು. ಆದರೆ ಇದು ಅದಕ್ಕಿಂತಲೂ ಹಿಂದಿನ ಕತೆ. ರೇಡಿಯೋ ಕೇಳುಗರೆಲ್ಲರಿಗೆ ಸಾಮುದಾಯಿಕವಾಗಿ ಪ್ರಸಾರ  ಮಾಡುತ್ತಿದ್ದ ಉಡುಪಿಯ ರೇಡಿಯೋ ಟವರ್ ಕತೆ.
ಉಡುಪಿ ಕೃಷ್ಣನ ನಾಡೆಂದು ಪ್ರಸಿದ್ಧವಾದ ಶಾಂತವಾದ ಊರು. ಇಲ್ಲಿನ ಅಜ್ಜರಕಾಡಿನಲ್ಲಿರುವ ಭುಜಂಗಪಾರ್ಕ್ ಸಂಜೆಯ ಹೊತ್ತು ವಿಶ್ರಾಂತಿ ಬಯಸಿ ಬರುವವರಿಗೆ, ಹರಟೆ ಕೊಚ್ಚುವ ಮಾತಿನ ಮಲ್ಲರಿಗೆ ಹೇಳಿಮಾಡಿಸಿದ ಜಾಗ. ಮಹಾತ್ಮಾ ಗಾಂಧೀಜಿಯವರು ಉಡುಪಿಗೆ ಬಂದಾಗ ಇಲ್ಲಿ ಒಂದು ಬೃಹತ್ ಸಭೆ ನಡೆದಿತ್ತು. ಇಲ್ಲಿನ ಮರಗಿಡಗಳ ತುಂಬಿದ ಪ್ರಶಾಂತ ವಾತಾವರಣದಲ್ಲಿ ಒಂದು ರೇಡಿಯೋ ಟವರ್ ಇದೆ. ಈಗ ಬಹುತೇಕ ನಿರ್ಲಕ್ಷಿಸಲ್ಪಟ್ಟಿರುವ ಕಟ್ಟಡವಾಗಿದ್ದರೂ ಹಿಂದೆ ಇದಕ್ಕೆ ಬಹಳ ಮನ್ನಣೆಯಿತ್ತಂತೆ. ಉಡುಪಿಯಲ್ಲಿರುವ ವೃದ್ಧರು ಹಾಗೂ ಕೆಲ ನಡುವಯಸ್ಸಿನವರನ್ನು ಬಿಟ್ಟರೆ ಇನ್ಯಾರಿಗೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ.
ಆಗ ಎಲ್ಲರೂ ಮನೆಯಲ್ಲಿ ಸ್ವಂತ ರೇಡಿಯೋ ಕೊಳ್ಳುವಷ್ಟು ಸಿರಿವಂತರಾಗಿರಲಿಲ್ಲ. ಆದರೂ ಜನರಿಗೆ ಸುದ್ದಿಯನ್ನು ಕೇಳಬೇಕೆಂಬ ಆಸೆ ಇತ್ತು. ಹಾಗಾಗಿ ಸಂಜೆ ಹೊತ್ತು ಅವರೆಲ್ಲಾ ಹೆಚ್ಚಾಗಿ ಅಜ್ಜರಕಾಡಿನ ರೇಡಿಯೋ ಟವರ್ ಬಳಿ ಸೇರಿ ಬರುತ್ತಿದ್ದರು. ಇಲ್ಲಿ ಸಂಜೆ ಸುಮಾರು 5 ಗಂಟೆಯ ನಂತರ ರೇಡಿಯೋ ಪ್ರಸಾರ ಆರಂಭವಾಗುತ್ತಿತ್ತು. ಎರಡು ದೊಡ್ಡ ಹಾರ್ನ್ ಹೊಂದಿದ್ದ ಅಷ್ಟಪಟ್ಟಿಯ ಎರಡಂತಸ್ತಿನ ಕಟ್ಟಡದಲ್ಲಿ ಬಹುದೂರದವರೆಗೆ ರೇಡಿಯೋ ಕೇಳಿಸುವಂತೆ ವ್ಯವಸ್ಥೆ ಇತ್ತು. ಜನರೆಲ್ಲಾ ಆಗ ಸುಮಾರು 7 ಗಂಟೆಯವರೆಗೆ ಇಲ್ಲಿ ಸುದ್ದಿ ಸಮಾಚಾರವನ್ನು, ಮನೋರಂಜನಾ ಕಾರ್ಯಕ್ರಮ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಕೇಳುತ್ತಿದ್ದರು. ಏಕಕಾಲಕ್ಕೆ ತುಂಬಾ ಜನರು ಇದನ್ನು ಕೇಳುತ್ತಿದ್ದದರಿಂದ ಸುದ್ದಿ ಹಾಗೂ ಕಾರ್ಯಕ್ರಮಗಳ ವಿಶ್ಲೇಷಣೆಯೂ ಅವರಲ್ಲಿ ನಡೆಯುತ್ತಿತ್ತು. ಒಟ್ಟಾರೆಯಾಗಿ ಸಂಜೆಯ ಸಮಯವನ್ನು ಉತ್ತಮ ರೀತಿಯಲ್ಲಿ ವಿನಿಯೋಗಿಸಲು ಉಡುಪಿ ಪರಿಸರದ ಜನರಿಗೆ ರೇಡಿಯೋ ಟವರ್ ಬಹಳ ಸಹಕಾರಿಯಾಗಿತ್ತು.
ರೇಡಿಯೋ ಟವರ್ಗೆ 'ಬಿಗಿಲ್ ತನಿಯನ ಟವರ್' ಎಂಬ ಇನ್ನೊಂದು ಹೆಸರು ಕೂಡಾ ಇತ್ತಂತೆ. ಆದರೆ ಬಗ್ಗೆ ಅಧಿಕೃತ ಮಾಹಿತಿಗಳು ಸಿಗುವುದಿಲ್ಲ. ಇದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ತನಿಯ ಎಂಬ ವ್ಯಕಿಯಿಂದಾಗಿ ಹೆಸರು ಬಂತು ಎಂದು ಅಭಿಪ್ರಾಯಗಳಿವೆ. ಇಲ್ಲಿ ಸಮಯವನ್ನು ಜನರಿಗೆ ತಿಳಿಸಲು ದಿನದ ಕೆಲವು ಪ್ರಮುಖ ಹೊತ್ತಿನಲ್ಲಿ ವಿಷಲ್(ತುಳುವಿನಲ್ಲಿ 'ಬಿಗಿಲ್') ಹೊರಡಿಸಲಾಗುತ್ತಿತ್ತು. ಅದರಲ್ಲೂ ವಿಶೇಷವಾಗಿ ಗಾಂಧೀಜಿಯವರು ತೀರಿಕೊಂಡ ದಿನದಂದು (ಹುತಾತ್ಮರ ದಿನ) ಇಲ್ಲಿ ಬೆಳಿಗ್ಗೆ 11 ಗಂಟೆಗೆ ಗಟ್ಟಿಯಾಗಿ ವಿಷಲ್ ಹೊಡೆದು ಗಾಂಧೀಜಿಯವರನ್ನು ಸ್ಮರಿಸಲಾಗುತ್ತಿತ್ತು ಮತ್ತು ಇದರ ವಿಷಲ್ ಸದ್ದು ಬಹುದೂರದವರೆಗೂ ಕೇಳಿಸುತ್ತಿತ್ತು ಎಂದು ಅದನ್ನು ಕೇಳುತ್ತಿದ್ದವರು ಹೇಳುತ್ತಾರೆ.

ಇಂದು ರೇಡಿಯೋ ಮನೆಯಿಂದ ಮರೆಯಾಗಿದೆ. ಮೊಬೈಲ್ ಫೋನ್ಗಳಲ್ಲಿ ಎಫ್.ಎಂ. ರೇಡಿಯೋಗಳು ಮಾತ್ರ ಅಪರೂಪಕ್ಕೆ ಸದ್ದು ಮಾಡುತ್ತಿವೆ. ಉಡುಪಿಯ ಜನತೆಗೆ ಸಾಮುದಾಯಿಕವಾಗಿ ಪ್ರಸಾರ ಮಾಡುತ್ತಿದ್ದ ರೇಡಿಯೋ ಟವರ್ ನಿಶ್ಶಬ್ದವಾಗಿ ವರ್ಷಗಳೇ ಕಳೆದಿವೆ. ರೇಡಿಯೋ ಅತ್ಯಂತ ಆಕರ್ಷಕ ಹಾಗೂ ಶಕ್ತಿಶಾಲಿ ಸಮೂಹ ಮಾಧ್ಯಮವಾಗಿದ್ದರೂ ಇತರ ಮಾಧ್ಯಮಗಳ ಭರಾಟೆಯಿಂದ ಮೂಲೆಗುಂಪಾಗುತ್ತಿರುವುದು ಖೇದಕರ. ರೇಡಿಯೋ ಕೇಳುಗರೇ ಇಲ್ಲದಿರುವಾಗ ಅದರಲ್ಲೂ ಟ್ರಾಫಿಕ್ ಸದ್ದುಗದ್ದಲಗಳು ಹೆಚ್ಚಾಗಿ ಯಾವುದೂ ಸ್ಪಷ್ಟವಾಗಿ ಕೇಳಿಸದೆ ಇರುವ ಸ್ಥಿತಿ ತಲುಪಿರುವಾಗ ಉಡುಪಿಯಲ್ಲಿ ರೇಡಿಯೋ ಟವರ್ಗೆ ಇಂದು ಕೆಲಸವಿಲ್ಲದಾಗಿದೆ. ಆದರೂ ಗತಕಾಲದ ನೆನಪುಗಳಿಗೆ ಸಾಕ್ಷಿಯಾಗಿ ಶಾಂತ ಪರಿಸರದ ಅಜ್ಜರಕಾಡಿನಲ್ಲಿ ಒಂಟಿ ಸಲಗದಂತೆ ಎದ್ದು ನಿಂತು ತನ್ನ ವಾಸ್ತು ಸೌಂದರ್ಯದಿಂದ ಜನರನ್ನು ಅತ್ತ ಸೆಳೆಯುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ