ಭಾನುವಾರ, ಫೆಬ್ರವರಿ 21, 2016

ಎರಡು ಗೆರೆಯ ಕಾಪಿ ಪುಸ್ತಕ

                ಇನ್ನೂ ಮುಸುಕೆಳೆದು ಮಲಗಬೇಕೆಂಬ ಮನಸ್ಸಿರುವಾಗಲೇ ಅಪ್ಪ ಒತ್ತಾಯ ಮಾಡಿ ಎಬ್ಬಿಸಿ ಹಲ್ಲುಜ್ಜಲು ಹೇಳುತ್ತಿದ್ದ ದಿನಗಳು ನೆನಪಾಗುತ್ತವೆ. ಹೊರಗಡೆ ಇನ್ನೂ ಸುರಿಯುತ್ತಿರುವ ಮಳೆ, ಕಪ್ಪೆಗಳ ಸಂಗೀತ ಕಚೇರಿ, ಕರೆಂಟು ರಾತ್ರಿ ಹೋದದ್ದು ಇನ್ನೂ ಬಂದಿಲ್ಲ.. ಹೀಗೆ ಒಂದೊದನ್ನೇ ನೆನಪು ಮಾಡಿಕೊಳ್ಳುತ್ತಾ ಹೊರಗೆ ಬರುತ್ತಿದ್ದೆ. ಇಂದು ಯಾವ ದಿನ? ಭಾನುವಾರವಿರಬಹುದಾ ಎಂಬ ಆಸೆಯೊಂದು ಮೂಡುತ್ತಿರುವಾಗಲೇ ಮೆದುಳಿನ ಸ್ವಿಚ್ ಆನ್ ಆಗಿ ಇಂದು ವಾರದ ದಿನ, ನೀನು ಶಾಲೆಗೆ ಹೋಗಬೇಕು ಎಂಬ ಸಂದೇಶ ಬರುತ್ತಿತ್ತು. ಒಮ್ಮೆ ಮಳೆಯಲ್ಲಿ ಹೊರಗೆ ಹೋಗುವುದಕ್ಕೆ ಬೇಜಾರೆನಿಸಿದರೂ ಮರುಕ್ಷಣದಲ್ಲೇ ಗೆಳೆಯರು, ಪಾಠ, ಹೊಸ ತರಗತಿ ಎಲ್ಲವೂ ನೆನಪಾಗಿ ಖುಯಾಗುತ್ತಿತ್ತು. ಶಾಲೆಗೆ ಹೊರಡಲು ಬೇಗ ರೆಡಿಯಾಗುತ್ತಿದ್ದೆ.

                ನೀಲಿ-ಬಿಳಿ ಯೂನಿಫಾರ್ಮಿಗೆ ಇಸ್ತ್ರಿ ತಾಗಿಸಿದ್ದು ನೆನಪಿಲ್ಲ. ಮೂರು-ನಾಲ್ಕು ವರ್ಷಕ್ಕೊಮ್ಮೆ ಹೊಸ ಬ್ಯಾಗು ಬೇಕೆಂದು ಹಠ ಹಿಡಿದು ಪಡೆದುಕೊಳ್ಳುತ್ತಿದ್ದೆ. ಸೀನಿಯರ್ ಗೆಳೆಯರಿಂದ ಅರ್ಧರೇಟಿಗೆ ಪಾಠ ಪುಸ್ತಕ ತೆಗೆದುಕೊಳ್ಳುತ್ತಿದ್ದೆ. ಹೊಸ ಪುಸ್ತಕಗಳಿಗೆ  ಹಿಂದಿನ ದಿನ ರಾತ್ರಿ ಅಮ್ಮ ಬೈಂಡ್ ಹಾಕುತ್ತಿದ್ದರು. ನೀಟಾಗಿ ಬೈಂಡ್ ಹಾಕಿದ ಮೇಲೆ ಕ್ರಿಕೆಟ್ ಆಟಗಾರರ ಅಥವಾ ರೆಸ್ಲಿಂಗ್ ದೈತ್ಯರ ಚಿತ್ರವಿದ್ದ ಲೇಬಲ್ ಅಂಟಿಸಿ ಅದರಲ್ಲಿ ಹೆಸರು, ತರಗತಿ, ವಿಜ್ಞಾನ ನೋಟ್ಸ್ ಪುಸ್ತಕ, ಶ್ರೀ ಗಣಪತಿ ಹಿ.ಪ್ರಾ. ಶಾಲೆ... ಎಂದೆಲ್ಲಾ ಬರೆಯುವಾಗ ಅದೆಷ್ಟು ಖುಷಿಯಾಗುತ್ತಿತ್ತು. ಕಂಪಾಸ್  ಬಾಕ್ಸಿನ ಒಳಗೆ ಅಂಟಿಸಿದ ಟೈಮ್ ಟೇಬಲ್ ನೋಡಿ ಆಯಾ ತರಗತಿಗಳಿಗೆ ಬೇಕಾದ ಪುಸ್ತಕ ಜೋಡಿಸಿ ಶಾಲೆಗೆ ಹೊರಡುತ್ತಿದ್ದೆ.

                ಪ್ರೈಮರಿ ಶಾಲೆಗೆ ಹೋಗುವ ದಾರಿಯುದ್ದಕ್ಕೂ ಪಕ್ಕದ ಮನೆಯ ಪುಟ್ಟ ನನ್ನ ಜೊತೆಗಿರುತ್ತಿದ್ದ. ಗದ್ದೆಯ ಬದುವಿ ಮೇಲೆ ನಡೆದು ಹೋಗುವಾಗ ಮಳೆಗೆ ಅಲ್ಲಲ್ಲಿ ಕಾಲು ಜರಿದು ಬೀಳುತ್ತಿದ್ದದ್ದು, ನೀರು ಹರಿಯುವ ಸಣ್ಣ ತೋಡು ಬಂದಾಗ ಕಾಲನ್ನು ಅಲ್ಲಿಯೇ ನಿಲ್ಲಿಸಿ ತಂಪು ನೀರಿನ ಸುಖ ಪಡೆದದ್ದು ಎಲ್ಲವೂ ನೆನಪಾಗುತ್ತವೆ. ಮೂರನೇ ಕ್ಲಾಸಿನವರೆಗೆ ನನಗೆ ರೈನ್ಕೋಟ್ ರಕ್ಷಣೆಯಿತ್ತು. ನಂತರ ಹೊಸ ಕೊಡೆ ಬಂತು. ಸಂಜೆ ಶಾಲೆ ಬಿಡುವ ಸಮಯಕ್ಕೆ ಮಳೆ ಬಂದರೆ ಎಲ್ಲರ ಮುಂದೆ ಟಪ್ ಎಂದು ನನ್ನ ಹೊಸ ಕೊಡೆ ಬಿಚ್ಚಿ ರಾಜಾರೋಷವಾಗಿ ನಡೆಯುತ್ತಿದ್ದೆ. ಹೊಸ ಕೊಡೆಯ ಬಟ್ಟೆಯಲ್ಲಿ ನೀರು ನಿಂತು ಒದ್ದೆಯಾಗುವುದಿಲ್ಲ, ಅದನ್ನು ಹಾಗೆಯೇ ಒಳಗೆ ತಂದು ಮಡಚಿಡಬಹುದೆಂದು ಗೊತ್ತಾದಾಗ ನನ್ನ ಕೊಡೆಯೇ ಶ್ರೇಷ್ಠ ಎಂದೆನಿಸುತ್ತಿತ್ತು. ಕೆಲವು ದಿನಗಳಲ್ಲೇ ನನ್ನ ಕೊಡೆ ಹೊಸತನದ ಗುಣ ಕಳೆದುಕೊಂಡು ಎಲ್ಲರೊಳಗೊಂದಾಗುತ್ತಿತ್ತು.

                ಬ್ಯಾಗಿನೊಳಗಿಂದ ಪುಸ್ತಕ ತೆಗೆದರೆ ಹೊಸ ಪುಸ್ತಕದೊಳಗಿಂದ ಬರುವ ಘಾಟು ಇಂದಿಗೂ ನೆನಪಿಸಿಕೊಳ್ಳುವಷ್ಟು ಗಾಢವಾಗಿದೆ. ನಾಲ್ಕೈದು ನೋಟ್ಸು ಪುಸ್ತಕ, ಎರಡು ಗೆರೆಯ, ಮೂರು ಗೆರೆಯ, ನಾಲ್ಕು ಗೆರೆಯ ಕನ್ನಡ, ಹಿಂದಿ, ಇಂಗ್ಲೀಷ್ ಕಾಪಿ ಬುಕ್ಗಳು (ಅದು ಕಾಪಿಯೋ ಅಥವಾ ಕೋಪಿಯೋ ಯಾವುದು ಸರಿಯಾದ ಭಾಷಾ ಪ್ರಯೋಗ ಎಂದು ತಿಳಿಯುವುದು ಆಗ ನನ್ನಂತಹ ಕಪಿಗೆ ಕಷ್ಟವಾಗುತ್ತಿತ್ತು!), ಪಾಠ ಪುಸ್ತಕಗಳು, ಶ್ರೀರಾಮ ಮಗ್ಗಿ ಪುಸ್ತಕ, ಕಂಪಾಸ್ ಬಾಕ್ಸ್, ಅರ್ಧ ಲೀಟರ್ ನೀರಿನ ಬಾಟಲಿ, ಇವು ನನ್ನ ಬ್ಯಾಗಿನೊಳಗಿರುತ್ತಿದ್ದ ಸೊತ್ತುಗಳು. ಕಾಪಿ ಪುಸ್ತಕದಲ್ಲಿ ದುಂಡಗೆ ಬರೆದು ಮಾಸ್ತರರಿಂದ ಭೇಷ್ ಅನ್ನಿಸಿಕೊಳ್ಳಬೇಕೆಂಬ ಅಭಿಲಾಷೆ ಬಹಳಷ್ಟಿತ್ತು. ಅಪರೂಪಕ್ಕೆ ಅವರು 'ಗುಡ್' ಎಂದು ಬರೆದಾಗ ಖುಷಿಯೋ ಖುಷಿ.

                ಬ್ಯಾಗಿನೊಳಗಿದ್ದ ಸಂಪತ್ತಿನಲ್ಲಿ ಕಂಪಾಸ್ ಬಾಕ್ಸಿಗೆ ಅದರದ್ದೇ ಆದ ಸ್ಥಾನವಿತ್ತು. ಎರಡು ಬರೆಯುವ ಪೆನ್ನು, ಒಂದು ಬರೆಯದ ಪೆನ್ನು, ಎರಡು ರಿಫೀಲ್, ಪೆನ್ಸಿಲ್, ರಬ್ಬರ್, ಕೋನಮಾಪಕ, ಕೈವಾರ, ಮಿನಿ ಸ್ಕೇಲು ಪಠ್ಯಕ್ಕೆ ಸಂಬಂಧಪಟ್ಟದ್ದಾದರೆ ದೇವರ ಫೋಟೋ, ನೆಚ್ಚಿನ ಹೀರೊ ಫೋಟೋ, ಶಿಕ್ಷಕರ ದಿನಾಚರಣೆಗೆ ಶಾಲೆಯಲ್ಲಿ ಹಂಚಿದ್ದ ಎಸ್. ರಾಧಾಕೃಷ್ಣನ್ ಫೋಟೋ, ಕೆಲವು ಅಪರೂಪದ ಸಣ್ಣ ಕಲ್ಲುಗಳು, ತಳಭಾಗದಲ್ಲಿ ಅಥವಾ ಪುಸ್ತಕದೊಳಗೆ ಸೇರಿರುತ್ತಿದ್ದ ವಿಲುಗರಿ, ಹೀಗೆ ಎಲ್ಲಕ್ಕೂ ಅಲ್ಲಿ ಜಾಗತ್ತು. ಜೊತೆಗೆ ಒಂದಲ್ಲ ಒಂದು ದಿನ ವಿಲುಗರಿ ಮರಿ ಹಾಕುತ್ತೆ ಎಂಬ ಮುಗ್ಧ ನಂಬಿಕೆ ಮನಸ್ಸಲ್ಲಿತ್ತು.

                ಶಾಲೆ ಪ್ರಾರಂಭವಾದ ತಿಂಗಳ ನಂತರ ನನ್ನ ಹುಟ್ಟುಹಬ್ಬ ಬರುತ್ತಿತ್ತು. ಅಪ್ಪ ಹಿಂದಿನ ದಿನವೇ ತಂದ ಚಾಕಲೇಟು ಕಟ್ಟು ಹಿಡಿದು ಹೊಸಬಟ್ಟೆ ಧರಿಸಿ ಶಾಲೆಗೆ ಹೋಗುತ್ತಿದ್ದೆ. ಮೊದಲು ಆಪ್ತ ಸ್ನೇಹಿತರ ಶುಭಾಶಯ, ಕೈಯಲ್ಲೇ ಬರೆದ ಶುಭಾಶಯ ಪತ್ರಗಳು, ಚಿಕ್ಕ ಪುಟ್ಟ ಉಡುಗೊರೆ ಸಿಗುತ್ತಿತ್ತು. ಶಿಕ್ಷಕರಿಗೆ ಮೊದಲು ಚಾಕಲೇಟು ಕೊಟ್ಟು ನಂತರ ತರಗತಿಯ ಸ್ನೇಹಿತರಿಗೆ ಹಂಚುವಾಗ ಏನೋ ಖುಷಿ. ಕ್ಲಾಸಿನಲ್ಲಿ ಹೀರೋಯಿನ್ ಥರಾ ಇದ್ದವಳು ನಂಗೆ ವಿಶ್ ಮಾಡುತ್ತಾಳಾ ಇಲ್ಲವಾ ಎಂಬ ಕಾತರತೆಯೂ ಜೊತೆಗಿರುತ್ತಿತ್ತು. ದಿನದ ಮಟ್ಟಿಗೆ ಶಿಕ್ಷಕರಿಂದ ಪೆಟ್ಟಿನ ಮಾಫಿ ಇರುತ್ತದೆ ಎನ್ನುವುದು ಆಗ ಹುಟ್ಟುಹಬ್ಬಕ್ಕೆ ಸಿಗುತ್ತಿದ್ದ ದೊಡ್ಡ ಉಡುಗೊರೆಯಾಗಿತ್ತು.

                ಮಳೆಗಾಲದಲ್ಲಿ ಶಾಲೆಗೆ ಬರುವಾಗ ಮಕ್ಕಳಿಗೆ ಅಪ್ಪ-ಅಮ್ಮನ ಜೊತೆ ಹೆಚ್ಚಾಗಿ ಇರುತ್ತಿತ್ತು. ಗೊರಬು ಹಿಡಿದೋ ಅಥವಾ ಕಡ್ಡಿ ತುಂಡಾದ ಕೊಡೆ ಹಿಡಿದೋ ಹೆತ್ತವರು ಮಕ್ಕಳನ್ನು ಗದ್ದೆ- ಬಯಲಿನಲ್ಲಿ ನಡೆಸಿಕೊಂಡು ಬರುತ್ತಿದ್ದರು. ಮಳೆ ಹೆಚ್ಚಾಗಿ 'ಬೊಲ್ಲ' (ನೆರೆ) ಬಂದಾಗ ಹೆತ್ತವರು ಸಂಜೆ ಬೇಗ ಬಂದು ಶಾಲೆಯ ಜಗುಲಿಯಲ್ಲಿ ನಿಲ್ಲುವುದು ಸಾಮಾನ್ಯವಾಗಿತ್ತು. ಮಳೆ ಜೋರಾದ ಕೂಡಲೇ ಶಾಲೆಗೆ ರಜೆ ಸಿಗಬಹುದೆಂಬ ಆಸೆ ಒಳಗೊಳಗೆ ಜಾಗೃತವಾಗಿ ಬೆಚ್ಚಗಿನ ಖುಷಿಯಾಗುತ್ತಿತ್ತು. ಕೊನೆಗೂ ಹೆಡ್ಮಾಸ್ಟರ್ ರಜೆ ಘೋಷಿಸಿದಾಗ ಮಳೆಯ ಸದ್ದಿಗಿಂತಲೂ ಜಾಸ್ತಿ ಕಿರುಚಿದ ನೆನಪು. ಇಂದು ತೊಟ್ಟಿಕ್ಕುತ್ತಿರುವ ಮಳೆ ಹನಿಗೆ ಕೈಯೊಡ್ಡಿ ನಿಂತಾಗ ಹಳೆಯದೆಲ್ಲವೂ ನೆನಪಾಗುತ್ತದೆ. ಜೊತೆಗೊಂದು ಹಳೆಯ ಡೈಲಾಗ್ 'ಮಕ್ಕಳಾಗಿರುವುದೇ ಚಂದ ಅಲ್ಲವಾ....'