ಶನಿವಾರ, ಅಕ್ಟೋಬರ್ 17, 2015

ಮರೆಯಲಾಗದ ವಿದ್ಯಾರ್ಥಿಗಳು- 02

ತನ್ನ ಇರುವಿಕೆ ಲೋಕಕ್ಕೆಲ್ಲಾ ಗೊತ್ತಾಗುವಂತೆ ಮಾಡುವವನು ರಾಮಾಂಜಿ. ನನ್ನ ವೃತ್ತಿ ಜೀವನದ ಮೊದಲ ವರ್ಷದ ವಿದ್ಯಾರ್ಥಿ. ಆಗಲೇ ಬೇರೆ ಬೇರೆ ಹೋರಾಟಗಳಲ್ಲಿ, ವಿವಿಧ ವಿದ್ಯಾರ್ಥಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹೆಸರು ಮಾಡಿದ್ದ.
ಕ್ಲಾಸಿನಲ್ಲಿ ಇದ್ದದ್ದೇ ಆರು ಜನ. ಒಬ್ಬ ವರ್ಷವಿಡೀ ಜಿಮ್ ನಲ್ಲಿದ್ದರೆ ಈ ರಾಮಾಂಜಿ ಬೆಂಗಳೂರು ಮಂಗಳೂರು ಎಂದು ಅಲೆಯುತ್ತಿದ್ದ. ಒಂದಿಷ್ಟು ಕತೆ ಕವನಗಳನ್ನು ಬರೆಯುತ್ತಿದ್ದ. ತನ್ನ ಧೋರಣೆಗಳಿಂದ ಕಾಲೇಜಿನಲ್ಲಿ ಕೆಲವರ ಪ್ರೀತ್ಯಾದರಕ್ಕೂ ಕೆಲವರ ನಿರ್ಲಕ್ಷ್ಯಕ್ಕೂ ಪಾತ್ರನಾಗಿದ್ದ ಈ ರಾಮಾಂಜಿಯಲ್ಲಿ ನನಗೆ ಇಷ್ಟವಾದದ್ದು ಆತನ ಮುಖದಲ್ಲಿದ್ದ ನಗೆ ಮತ್ತು ಸಿಕ್ಕಿದಲ್ಲೆಲ್ಲಾ ನಮಸ್ತೆ ಸರ್ ಎಂಬ 'ಧರ್ಮ'ಕ್ಕೆ ಸಿಗುತ್ತಿದ್ದ ಗೌರವ!
ರಾಮಾಂಜಿಯಲ್ಲಿ ಜನರನ್ನು ಆಕರ್ಷಿಸಿವ ಶಕ್ತಿಯಿತ್ತು. ಕೃಷ್ಣಾಷ್ಟಮಿಗೆ ಈತ ವೇಷಹಾಕಿದಾಗ ಆ ವಿಚಿತ್ರ ವೇಷವನ್ನು ಮೆಚ್ಚದವರು ಬಹಳ ಕಡಿಮೆ. ಅಘೋರಿಯಾಗಿ, ಆಫ್ರಿಕಾದ ಟ್ರೈಬಲ್ ವೇಷಧಾರಿಯಾಗಿ, ಚಿತ್ರ ವಿಚಿತ್ರ ವೇಷಗಳಿಂದ ಉಡುಪಿ ಆಸುಪಾಸಿನಲ್ಲಿ ರಾಮಾಂಜಿ ಬಹಳ ಫೇಮಸ್ ಆಗಿದ್ದಾನೆ. ಫೋಟೋಗ್ರಾಫರ್ಸ್ ಅಂತೂ ಈತನ ವೇಷವನ್ನು ಸೆರೆಹಿಡಿಯದೆ ಬಿಡುವುದೇ ಇಲ್ಲ. ಇದರಲ್ಲೇ ಹೆಚ್ಚು ಖುಷಿ ನಮ್ಮ ರಾಮಾಂಜಿಗೆ.
ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ ಅನ್ನುವುದು ಬಿಟ್ಟರೆ ಆತನ ಬಾಲ್ಯದಲ್ಲಿ ಖುಷಿಕೊಡುವ ನೆನಪುಗಳಿಲ್ಲ. ಬೆಳೆದದ್ದು 'ನಮ್ಮ ಭೂಮಿ' ಎಂಬ ಫೌಂಡೇಶನ್ ನಲ್ಲಿ. ರಾಜಕೀಯ ಧುರೀಣರಿಂದ ಹಿಡಿದು ಗಣ್ಯಾತಿಗಣ್ಯರೆಲ್ಲರ ಪರಿಚಯ ಈತನಿಗಿದ್ದರೂ ತನ್ನ ಸ್ವಂತಿಕೆಯಿಂದ ಇದಕ್ಕೂ ಹೆಚ್ಚು ಏನಾದರೂ ಈತ ಸಾಧಿಸಬೇಕಿತ್ತು ಎಂದು ಯಾವಾಗಲೂ ಅನ್ನಿಸುತ್ತದೆ.
ಇಂತಿಪ್ಪ ರಾಮಾಂಜಿಯನ್ನು ಯಾಕೆ ಮರೆಯಲು ಸಾಧ್ಯವಿಲ್ಲವೆಂದರೆ ಆತ ಹೆಸರೆತ್ತಿದ ಕೂಡಲೇ ಯಾವುದಾದರೊಂದು ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ.
ಗೊತ್ತಿಲ್ಲ.. ಈಗ ಸ್ವಲ್ಪ ಹೊತ್ತಿನಲ್ಲಿ ಕಾಲ್ ಬಂದರೂ ಬರಬಹುದು!
-ಸುಚಿತ್ ಕೋಟ್ಯಾನ್ ಕುರ್ಕಾಲು

ಶುಕ್ರವಾರ, ಅಕ್ಟೋಬರ್ 16, 2015

ಮರೆಯಲಾಗದ ವಿದ್ಯಾರ್ಥಿಗಳು -04

ಬದುಕು ಎಷ್ಟೊಂದು ಪಾಠಗಳನ್ನು ಕಲಿಸುತ್ತದೆ...ನಾವು ಸುಮ್ಮನೇ ನೋಡಿ ಆಕಳಿಸುತ್ತೇವೆ...- ಗೆಳೆಯ ಗೋಪಿ ಬರೆದ ಸಾಲುಗಳಿವು. ನಾನು ನನ್ನ ವಿದ್ಯಾರ್ಥಿಗಳಿಗೆ ಕಲಿಸಿದಕ್ಕಿಂತ ಅವರಿಂದ ಕಲಿತದ್ದು ಹೆಚ್ಚು. ಜೀವನದ ಪಾಠಗಳನ್ನು ನನಗೆ ಚೆನ್ನಾಗಿ ಕಲಿಸಿದ್ದು ಈ ನನ್ನ ವಿದ್ಯಾರ್ಥಿನಿ.. ಹೆಸರು ಪ್ರೇಮಾ.

ಈಕೆ ಬಾಗಲಕೋಟೆಯವಳು. ನಮ್ಮವರ ಭಾಷೆಯಲ್ಲಿ ಬಿಜಾಪುರದವಳು. ನಾಗರಿಕ ಜನರೆನಿಸಿಕೊಂಡವರು ಹಿಡಿಶಾಪ ಹಾಕುತ್ತಾ ಮೂಗು ಮುಚ್ಚಿಕೊಂಡು ನಡೆಯುವ ಸ್ಲಮ್ ನಲ್ಲಿ ಹುಟ್ಟಿ ಬೆಳೆದಾಕೆ. ಬಾಲ್ಯದಿಂದಲೂ ಅಕ್ಷರ ಎಂದರೆ ಪ್ರೀತಿ. ಅದು ಆಕೆಗೆ ಬಹಳ ಕಷ್ಟಪಟ್ಟು ದೊರೆತ ಆಸ್ತಿ. ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹವಿಲ್ಲದ, ಬಡತನದಿಂದ ಕೂಡಿದ ಲಂಬಾಣಿ ಸಮಾಜದಿಂದ ಬಂದವಳು ಇಂದು ಡಿಗ್ರಿ ಮುಗಿಸಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾಳೆ ಎಂದರೆ ಅದಕ್ಕೆ ಕಾರಣ ಅವಳಲ್ಲಿ ಹುದುಗಿರುವ ಛಲ ಮತ್ತು ಗುರಿಸಾಧನೆಯ ದೂರದೃಷ್ಟಿ.

ಜೀವನದಲ್ಲಿ ಕ್ಷಣಕ್ಷಣಕ್ಕೂ ಎದುರಾದ ಸವಾಲುಗಳು, ನೋವು, ಅಪಮಾನಗಳನ್ನು ಸಹಜವಾಗಿ ಸ್ವೀಕರಿಸಿ ಗೆಲುವಿನ ಮೆಟ್ಟಿಲಾಗಿ ಮಾಡಿಕೊಂಡವಳು ಪ್ರೇಮಾ. ಬಾಲ್ಯದಲ್ಲಿ ಮನೆಗೆಲಸ ಮುಗಿಸಿ ಶಾಲೆಗೆ ಹೋಗುವಾಗ ತಡವಾಗುತ್ತಿದ್ದು, ಆಕೆಯ ಒದ್ದೆಬಟ್ಟೆ ಕಂಡು ಮೇಡಂ ಎಲ್ಲರ ಮುಂದೆ ಅಪಮಾನ ಮಾಡುವಂತೆ ಬಯ್ಯುತ್ತಿದ್ದು, ಶೌಚಕ್ಕೆಂದು ಪ್ರಾತಃಕಾಲದಲ್ಲಿ ಬೇಗ ಬಯಲಿಗೆ ಹೋದಾಗಲೂ ಬೆನ್ನಿಗೆ ಬೀಳುತ್ತಿದ್ದ ದಂಟೆಯ ಪೆಟ್ಟು, ಇವ್ಯಾವುದನ್ನೂ ಇತರರ ಸಹಾನುಭೂತಿ ಪಡೆಯಲು ಈಕೆ ಬಳಸಿಕೊಳ್ಳಲಿಲ್ಲ. ಬಡತನದಿಂದ ದೂರವಾಗಲು ಶಿಕ್ಷಣವೊಂದೇ ದಾರಿ ಎಂದು ಕಲಿಯುವ ಹಠತೊಟ್ಟವಳು ತಾನೂ ಕಲಿಯಲು, ಜೊತೆಯ ಸ್ಲಮ್ ನ ಮಕ್ಕಳಿಗೂ ಮನೆಪಾಠ ಹೇಳಿಕೊಟ್ಟಳು. ದೀಪದಿಂದ ದೀಪವನ್ನು ಹಚ್ಚಿದಳು.

ಪ್ರೇಮಾಳಂತಹ ವಿದ್ಯಾರ್ಥಿನಿಯನ್ನು ಮರೆಯಲು ಸಾಧ್ಯವಿಲ್ಲ. ನಿನ್ನಂತಹ ವಿದ್ಯಾರ್ಥಿಗಳಿಗೆ ಕಲಿಸಿದ್ದೇನೆ ಎಂಬುದೇ ನನಗೆ ಹೆಮ್ಮೆ. ಶುಭವಾಗಲಮ್ಮಾ ನಿನಗೆ..

-ಸುಚಿತ್ ಕೋಟ್ಯಾನ್ ಕುರ್ಕಾಲು

ಬುಧವಾರ, ಅಕ್ಟೋಬರ್ 14, 2015

ಮರೆಯಲಾಗದ ವಿದ್ಯಾರ್ಥಿಗಳು -03

ಅಶ್ವತ್ಥ ಸುಬ್ರಾಯ ಹೆಗಡೆ ಆತನ ಹೆಸರು. ಅರ್ಧಕ್ಕೆ ಕಾಲೇಜು ಬಿಟ್ಟವ. ಆತ ಬಿಟ್ಟ ಅನ್ನುವುದಕ್ಕಿಂತಲೂ ಕಾಲೇಜು ಆತನನ್ನು ತೆಗಯಿತು ಅನ್ನುವುದು ಹೆಚ್ಚು ಸರಿ. ಕಾರಣ, ಕಾಲೇಜಿನ ನಿಯಮಗಳ ಶಿಸ್ತು ಅನ್ನುವುದು ಆತನಿಗೆ ಗೊತ್ತಿರಲಿಲ್ಲ.

ಪ್ರಥಮ ವರ್ಷ ಬಂದಾಗ ಬಹಳ ನಿರೀಕ್ಷೆ ಮೂಡಿಸಿದ್ದ ಸ್ಫುರದ್ರೂಪಿ ಹುಡುಗನೀತ. ಯಕ್ಷಗಾನದ ಸ್ತ್ರೀ ವೇಷಧಾರಿ ಬಣ್ಣ ಕಳಚಿ ಬಂದಾಗ ಕಾಣುವಷ್ಟು ಚಂದ ಕಾಣುತ್ತಿದ್ದ. ಶಿರಸಿಯಿಂದ ಬಂದಿದ್ದರಿಂದ ಗದ್ದೆ ತೋಟಗಳ ಮೇಲೆ ಸಹಜ ಆಸಕ್ತಿಯಿತ್ತು. ಸಾಹಿತ್ಯವನ್ನೂ ತುಂಬಾ ಪ್ರೀತಿಸುತ್ತಿದ್ದ. ಸುತ್ತಾಡಲು ನಮ್ಮ ಜೊತೆ ಯಾವಾಗಲೂ ಸಿದ್ಧನಿರುತ್ತಿದ್ದ. ಉರಗತಜ್ಞ ಗುರುರಾಜ ಸನಿಲರ ಜೊತೆ ಸೇರಿ ಹಾವುಗಳ ಬಗ್ಗೆನೂ ಆಸಕ್ತಿ ತೋರಿಸಿದ್ದ. (ನಾಗರಹಾವೊಂದು ಆತನ ಎರಡು ಕಾಲಿನ ನಡುವೆ ಹಾದುಹೋಗುವ ವೀಡಿಯೋ ಇಂದಿಗೂ ನಮ್ಮಲ್ಲಿದ್ದು ನೋಡುವವರಿಗೆ ಅಚ್ಚರಿ ಮೂಡಿಸುತ್ತೆ) ಖಂಡಿತವಾಗಿಯೂ ಒಬ್ಬ ಆದರ್ಶ ವಿದ್ಯಾರ್ಥಿಯಾಗಿ ಅಶ್ವತ ಬೆಳೆಯುವ ದಾರಿಯಲ್ಲಿದ್ದ.

ಆದರೆ ಈ ಹುಡುಗನಿಗೊಂದು ದೌರ್ಬಲ್ಯವಿತ್ತು. ತರಗತಿಗೆ ಬರುವುದರಲ್ಲಿ ಈತ ಬಹಳ ಹಿಂದೆ. ಮೊದಲ ಸೆಮಿಸ್ಟರ್ ನಲ್ಲಿ ಹಾಜರಿ ಕಮ್ಮಿ ಬಂದಾಗ ನಾವು ಆತನ ಪರವಾಗಿ ನಿಂತೆವು. ಯಾಕೆಂದರೆ ಅಶ್ವತ್ಥನ ತಂದೆಗೆ ಹುಷಾರಿರಲಿಲ್ಲ ಹಾಗಾಗಿ ಊರಿಗೆ ಹೋಗಿ ಅಡಕೆ ಕೊಯ್ಯುವ ಜವಾಬ್ದಾರಿ ಈತನೇ ಮಾಡಬೇಕಿತ್ತು. ಇದರ ಜೊತೆಗೆ ಅಡುಗೆ ಕೆಲಸಗಳಿಗೆ, ಬಡಿಸುವುದಕ್ಕೆ ಈತ ಹೋಗುತ್ತಿದ್ದ. ಹಾಗಾಗಿ ಕಷ್ಟ ಪಡುತ್ತಿದ್ದ ವಿದ್ಯಾರ್ಥಿಗೆ ಬೆಂಬಲಿಸುವುದರಲ್ಲಿ ತಪ್ಪಿಲ್ಲವೆಂದು ನಾವಂದುಕೊಂಡಿದ್ದೆವು, ಅವಕಾಶ ನೀಡಿದ್ದೆವು.

ಆದರೆ ಮುಂದೆ ಹುಡುಗನಿಗೆ ಅದೇ ಅಭ್ಯಾಸವಾಯಿತು. ಮೂರನೇ ಸೆಮಿಸ್ಟರ್ ನಲ್ಲಿ ಯಾವ ತರಗತಿಗೂ ಬರಲೇ ಇಲ್ಲ. ಸಹಜ ಕಳಕಳಿಯಿಂದ ನಾವು ಎಷ್ಟು ಫೋನ್ ಕಾಲ್ ಮಾಡಿದರೂ ಈತ ಸ್ವೀಕರಿಸಲೇ ಇಲ್ಲ. ಅಪಾತ್ರನಿಗೆ ಸಹಾಯಮಾಡಿದೆವೆನೋ ಎಂದು ನಮಗೆ ಅನ್ನಿಸಿತು. ಅಶ್ವತ್ಥನ ಮೇಲೆ ನಂಬಿಕೆ ಕಡಿಮೆಯಾಯಿತು. 'ಶಾರ್ಟೇಜ್' ಇದ್ದುದರಿಂದ ಕಾಲೇಜು ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ಸಹಜವಾಗಿಯೇ ಅಶ್ವತ್ಥ ಕಾಲೇಜು ಬಿಟ್ಟ.

ಮತ್ತೆ ಅಶ್ವತ್ಥ ಕಾಣಸಿಗಲಿಲ್ಲ. ಅರ್ಧಕ್ಕೆ ಕಾಲೇಜು ಬಿಡುವವರ ಮೇಲೆ ಬೇಸರ, ಸಿಟ್ಟು ಎಲ್ಲವೂ ಬರುತ್ತದೆ. ಅದರಲ್ಲೂ ನಮಗೆ ಪ್ರಿಯರಾದವರೊಬ್ಬರು ಹೀಗೆ ಮಾಡಿದಾಗ ನಿರಾಶೆಯಾಗುತ್ತದೆ. ಬಹುಶಃ ಆತ ಈಗ ಊರಲ್ಲೇ ಇದ್ದಾನೆ. ಮನಸ್ಸು ಮಾಡಿದ್ದರೆ ಡಿಗ್ರಿ ಮುಗಿಸುವ ಹಂತದಲ್ಲಿದ್ದ. ಏನು ಮಾಡೋಣ ಹೇಳಿ? ಎಲ್ಲಿಯೇ ಇರಲಿ. ಸುಖವಾಗಿರಲಿ. ಅದಷ್ಟೇ ಹಾರೈಕೆ.

-ಸುಚಿತ್ ಕೋಟ್ಯಾನ್ ಕುರ್ಕಾಲು

ಭಾನುವಾರ, ಅಕ್ಟೋಬರ್ 11, 2015

ಮರೆಯಲಾಗದ ವಿದ್ಯಾರ್ಥಿಗಳು -01

ಸ್ನಾತಕೋತ್ತರ ಪದವಿ ಮುಗಿಸಿ ನೇರವಾಗಿ ಉಪನ್ಯಾಸಕನಾಗಿ ಎಂಜಿಎಂ ಕಾಲೇಜು ಸೇರಿದ್ದೆ. ಎಲ್ಲವೂ, ಎಲ್ಲದೂ ಹೊಸ ಅನುಭವ. ಹಳೆಯ ಬ್ಯಾಚಿನ ಸೀನಿಯರ್ ವಿದ್ಯಾರ್ಥಿಗಳನ್ನು ಮಾತನಾಡಿಸುವುದಕ್ಕೆ ಕೊಂಚ ಭಯವಾಗುತ್ತಿದ್ದುದರಿಂದ ಹೊಸಬರತ್ತ ಹೆಚ್ಚು ಆಸಕ್ತಿ ವಹಿಸುತ್ತಿದ್ದೆ. ಆಗ ಕಾಣಸಿಕ್ಕವನೇ ಗಂಗಾಧರ.

ದೂರದ ಕೊಪ್ಪಳದಿಂದ ಉಡುಪಿಗೆ ಬಂದಿದ್ದ ಗಂಗಾಧರ. ಮೊದಲ ನೋಟಕ್ಕೆ ಆತನ ಕಣ್ಣುಗಳೇ ನನಗೆ ಕಂಡಿತ್ತು. ದೊಡ್ಡ ದೊಡ್ಡ 'ಬೋಳೆ' ಕಣ್ಣುಗಳು  ಸದಾ ಕೆಂಪಾಗಿದ್ದು ಹಳಿಹೈದನೊಬ್ಬ ಮೊದಲ ಬಾರಿ ಪ್ಯಾಟೆ ಕಂಡಾಗ ಆಗುವ ಭಯ ಆತನಲ್ಲಿ ಗೋಚರಿಸಿತ್ತು.. ನಿಜ ಹೇಳಬೇಕಾದರೆ ಆ ಕಣ್ಣುಗಳೇ ನನ್ನನ್ನು ಆಕರ್ಷಿಸಿದ್ದು.

ಕ್ಲಾಸಿನ ಇತರರು ಹೊಸ ಸ್ನೇಹಿತರ ಹತ್ರ ಮನಬಿಚ್ಚಿ ಮಾತನಾಡುತ್ತಿದ್ದರೆ ಗಂಗಾಧರ ಮಂಕಾಗಿ ಬಿಡುತ್ತಿದ್ದ. ಯಾರ ಸಹವಾಸವೂ ಬೇಡ ಎಂಬಂತೆ ಒಬ್ಬನೇ ಇರುತ್ತಿದ್ದ. ಮೇಲ್ನೋಟಕ್ಕೆ ಆತ ಉಡುಪಿಯ ವಾತಾವರಣ ಕಂಡು ಭಯಗೊಂಡವನಂತೆ ಕಂಡ. ವಿಚಾರಿಸಿದರೆ "ಹೌದು ಸರ್", "ಇಲ್ಲ ಸರ್" ಅನ್ನವುದು ಬಿಟ್ಟರೆ ಬೇರೆ ಶಬ್ದಗಳೇ ಆತನ ಬಾಯಿಯಿಂದ ಹೊರಡುತ್ತಿರಲಿಲ್ಲ. ಹುಡುಗ ಇಲ್ಲಿಗೆ ಸೆಟ್ಟಾಗ್ಲಿಕ್ಕಿಲ್ಲ ಅನ್ನಿಸತೊಡಗಿತು.

ಗಂಗಾಧರನ ಭಯ ದೂರ ಮಾಡಲು ಆತನ ಕೆಲ ಸ್ನೇಹಿತರು ಪ್ರಾಮಾಣಿಕವಾಗಿ ಪ್ರಯತ್ನಿಸಿದರು. ಆದರೆ ಆತ ಉಡುಪಿಗೆ ಒಗ್ಗಲೇ ಇಲ್ಲ. ಕುಚ್ಚಿಗೆ ಅಕ್ಕಿಯಿಂದ ಹಿಡಿದು ನಮ್ಮ ವಿದ್ಯಾರ್ಥಿಗಳ 'ಹೈ ಫೈ' ಜೀವನಶೈಲಿ ಆತನಿಗೆ ಅಜೀರ್ಣವಾಗತೊಡಗಿತು. ಗಂಗಾಧರ ಮೆಲ್ಲನೆ ಗಂಟುಕಟ್ಟಲು ಶುರುಮಾಡಿದ. "ಸರ್ ಊರಿಗೆ ಹೋಗಿ ಬರುತ್ತೇನೆ" ಎಂದು ಹೇಳತೊಡಗಿದ. ಹೋದರೆ ಈತ ಮತ್ತೆ ಬರಲಿಕ್ಕಿಲ್ಲ ಎಂದು ನಾನು ಮತ್ತು ಮಂಜುನಾಥ್ ಸರ್ ತುಂಬಾ ಪ್ರಯತ್ನಿಸಿದೆವು ಆತನನ್ನು ಉಡುಪಿಯಲ್ಲೇ ನೆಲೆಊರುವಂತೆ ಮಾಡಲು.. ಪುಣ್ಯಾತ್ಮ ಒಪ್ಪಿದ.

ಅದರೆ.. ಗಂಗಾಧರನಿಗೆ ದೊಡ್ಡ ಜ್ವರ ಬಂತು. ಮಲೇರಿಯಾ ಇರಬೇಕು. ನೆನಪಾಗುತ್ತಿಲ್ಲ. ಮೊದಲೇ ಕೆಂಪಾಗಿದ್ದ ಆತನ ಕಣ್ಣುಗಳು ಕೆಂಡದ ಉಂಡೆಯಾದವು. ಊರಿಗೆ ಹೋಗುತ್ತೇನೆಂದು ಗೋಗರೆಯತೊಡಗಿದ. ಇಷ್ಟು ಜ್ವರ ಬಂದಾಗಲೂ ಇಲ್ಲಿ ಉಳಿಸಿಕೊಳ್ಳುವುದು ಸರಿಕಾಣಲಿಲ್ಲ. ಹೋಗಿ ಬಾ ಎಂದೆವು. ಊರಿಗೆ ಹೋಗಲು ಕೈಯಲ್ಲಿ ಕಾಸೂ ಆತನಲ್ಲಿರಲಿಲ್ಲ. ಕೊನೆಗೆ ಟಿಕೇಟಿಗೆ ಒಂದಿಷ್ಟು ಹಣವನ್ನು ಜೇಬಿಗೆ ತುರುಕಿ ಕಳಿಸಿಕೊಟ್ಟೆವು; ಆತ ಹಿಂದಿರುಗಿ ಬರಬಹುದು ಎಂಬ ಕ್ಷೀಣ ಆಸೆಯಿಂದ.

ಹಾರಿಹೋದವ ಮರಳಿ ಬರಲೇ ಇಲ್ಲ. ನಗರ ಜೀವನಕ್ಕೆ ಒಗ್ಗಿಕೊಳ್ಳಲಾಗದೆ ಆತ ಸೋತ ಎಂದು ಬಹಳಷ್ಟು ಸಾರಿ ಅನ್ನಿಸುತ್ತದೆ. ಆದರೆ ಇಲ್ಲಿದ್ದು ಇಲ್ಲಿಯವರ ಮಧ್ಯೆ ಸಂಪೂರ್ಣ ಕೆಡುವುದಕ್ಕಿಂತ ಆತ ವಾಪಸ್ ಹೋಗಿ ಒಳ್ಳೆಯ ಕೆಲಸ ಮಾಡಿದ ಎಂದು ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ. ಕೆಂಪು ಬಣ್ಣದ 'ಬೋಳೆ' ಕಣ್ಣಿನ ಗಂಗಾಧರ ಯಾವಾಗಲೂ ನೆನಪಾಗುತ್ತಾನೆ...

-ಸುಚಿತ್ ಕೋಟ್ಯಾನ್ ಕುರ್ಕಾಲು

ಶುಕ್ರವಾರ, ಅಕ್ಟೋಬರ್ 9, 2015

ಉಪದ್ರ

"ಜೋಕುಲಿತ್ತಿನಲ್ಪ ಎನನ್ ಕೌಂಪಡೆ.. ಪಂಡ್ ದ್ ಬ್ಯಾರಿ ಪಂತೆಗೆ.. "

ಹಳೆಯ ತುಳು ಗಾದೆಯೊಂದು ಇಂದು ನೆನಪಾಯಿತು.. ಕಾರಣ ಎರಡೆರಡು ಬಾರಿ ಮಕ್ಕಳ ಉಪದ್ರ ಜಾಸ್ತಿಯಾಗಿ ಇಂದು ಕಾಣಸಿಕ್ಕಿತು.. ಹಾಗಾಗಿ ಬರೆಯುತ್ತಿದ್ದೇನೆ..

ಘಟನೆ 1:
ಅದು ಗಾಂಧೀ ಜಯಂತಿ ಕಾರ್ಯಕ್ರಮ.. ಮುಖ್ಯ ಅತಿಥಿಗಳು ಬಹಳ ಗಹನವಾದ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಪುಟಾಣಿ ಮಗುವೊಂದು ತನ್ನಷ್ಟಕ್ಕೇ ಮಾತನಾಡುತ್ತಾ ಚೇಷ್ಟೆ ಮಾಡುತ್ತಿದೆ. ತಾಯಿಯ ಜೊತೆಗೆ ಕ್ಷಣಕ್ಕೊಮ್ಮೆ ಹಠ ಮಾಡುತ್ತಿದೆ. ಆ ಕಡೆ ಈ ಕಡೆ ಕುಳಿತವರಿಗೆ ಮಗುವನ್ನು ನೋಡುವುದೋ ಅಥವಾ ಭಾಷಣ ಕೇಳುವುದೋ ಎಂಬ ಗೊಂದಲ. ತಾಯಿಯೂ ಮಗುವನ್ನು ಸುಮ್ಮನಿರಿಸುವ ಪ್ರಯತ್ನ ಮಾಡಲಿಲ್ಲ. ಮಗು ತನ್ನ ಚಿರಿಪಿರಿ ಮುಂದುವರಿಸಿತು. ಎಂದೂ ಯಾವುದಕ್ಕೂ ಮಾತನಾಡದ ನಮ್ಮವರು ಸಹಿಸಿಕೊಂಡು ಕೂತರು. ಎಷ್ಟು ಕೇಳಿದರೋ ದೇವರೇ ಬಲ್ಲ!

ಘಟನೆ 2:
ಬಸ್ಸಿನಲ್ಲಿ ಮನೆಗೆ ಬರುವಾಗ ಸೀಟು ಸಿಗದೆ ಕೊನೆಗೆ ಮಗು ಕುಳ್ಳಿರಿಸಿದವರ ಪಕ್ಕ ಕುಳಿತೆ.
ಆ ಮಗುವಿನ ತಂದೆ ಮಗುವಿಗೆ ಹೆಚ್ಚು ಜಾಗ ನೀಡಿದರೆ ವಿನಹ ನನಗಲ್ಲ. ಇಬ್ಬರು ಕೂರುವ ಜಾಗದಲ್ಲಿ ಮೂವರು ಕುಳಿತೆವು. ಮಗು ಒಂದೇ ಸಮನೆ ರಂಪ ಮಾಡುತ್ತಿತ್ತು. ಅಪ್ಪನ ಕಿಸೆಯನ್ನು ಎಳೆದಾಡುತ್ತಿತ್ತು. ನನ್ನ ಪ್ಯಾಂಟು, ಶರಟಿನ ಮೇಲೂ ಧಾಳಿಯಾಯಿತು. ಮಗುವಿನ ಅಪ್ಪನಿಗೆ ಇದೆಲ್ಲಾ ಖುಷಿ ಕೊಡುತ್ತಿತ್ತೇನೋ. ಮೊದಲೇ ಕುಳಿತು ಕೊಳ್ಳಲು ಜಾಗವಿಲ್ಲ. ಅದರ ಜೊತೆಗೆ ಈ ಮಗುವಿನ ಪಕ್ಕವಾದ್ಯ. ನಿಧಾನಕ್ಕೆ 'ಕಣ್ಣು ಕೂರಿ'ದಂತಾದರೆ ಮಗುವಿನ ಸ್ವರ ತಾರಕಕ್ಕೇರುತ್ತಿತ್ತು. ಯಾರಾದರೂ ಹಿರಿಯರು ಬಂದರೆ ಸೀಟು ಬಿಟ್ಟುಕೊಟ್ಟು ಇದರಿಂದ ಪಾರಾಗಬಹುದು ಎಂದು ನಾನು ಆಲೋಚಿಸುತ್ತಿದ್ದೆ. ಆದರೆ ಇಂದು ಯಾರೂ ಬರಲೇ ಇಲ್ಲ. ಆವಾಗಲೇ ಬರೆಯಬೇಕು ಅಂದುಕೊಂಡಿದ್ದೆ, ಆದರೆ ಮೊಬೈಲ್ ಹೊರತೆಗೆದರೆ ಎಲ್ಲಿ ಅದೂ ಕೂಡ ಮಗುವಿನ ಧಾಳಿಗೆ ತುತ್ತಾಗುತ್ತೇನೋ ಎಂದು ಹೊರತೆಗೆಯಲಿಲ್ಲ.

ಮಕ್ಕಳೆಂದರೆ ನನಗೆ ಪ್ರೀತಿಯಿದೆ. ಆದರೆ ಹಠಕ್ಕೊಂದು ಮಿತಿಯಿದೆ ಅಲ್ಲವೇ. ಗಂಭೀರ ಸಮಾರಂಭಗಳಲ್ಲಿ ಅಥವಾ ಪೂಜೆ ಪುನಸ್ಕಾರಗಳಾಗುವಾಗ ಮಕ್ಕಳಿಂದ ನಮ್ಮ ಏಕಾಗ್ರತೆಗೆ ಭಂಗವಾಗುವುದರೆ  ಕಷ್ಟವಾಗುತ್ತದೆ. ಎಲ್ಲರೂ ಕಷ್ಟಪಡುವುದಕ್ಕಿಂತ ಮಗುವಿನ ತಾಯಿ ಅಥವಾ ತಂದೆ ಆ ಮಗುವನ್ನು ಹೊರಗೆ ಎತ್ತಿಕೊಂಡು ಹೋಗುವುದು ಒಳ್ಳೆಯದು ಅಂತ ನನ್ನ ಅನಿಸಿಕೆ.

ನನಗೂ ಒಂದು ಮಗು ಆದರೆ ಇದೆಲ್ಲಾ ಅರ್ಥ ಆಗಬಹುದು..!

- ಸುಚಿತ್ ಕೋಟ್ಯಾನ್ ಕುರ್ಕಾಲು

ರೇಡಿಯೋ ನೆನಪು

ರೇಡಿಯೋ ಎಂದರೆ ಸಾಕು ಬಾಲ್ಯ ನೆನಪಾಗಿಬಿಡುತ್ತೆ...
ರೇಡಿಯೋ ಕೇಳುತ್ತಲೇ ಬೆಳೆದವ ನಾನು..
ಬೆಳಿಗ್ಗೆ ಏಳೋ ಹೊತ್ತಿಗೆ ಅಪ್ಪ ರೇಡಿಯೋ ಇಟ್ಟಿರುತ್ತಿದ್ದರು.. ಆಕಾಶವಾಣಿಯ ಮುಂಜಾವದ ಟ್ಯೂನ್ ಕೇಳುವುದು ಒಂಥರಾ ಸುಪ್ರಭಾತ ಕೇಳಿದಷ್ಟೇ ಹಿತ.. ಹಲ್ಲುಜ್ಜಿ ತಿಂಡಿ ತಿನ್ನುವ ಹೊತ್ತಿಗೆ ಮಂಗಳೂರು ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತೆ, ನಂತರ ಪ್ರದೇಶ ಸಮಾಚಾರ ಬರುತ್ತಿತ್ತು.  "ಸಂಸ್ಕೃತ ವಾರ್ತಾ ಶ್ರುಯಂತಾಮ್ ಪ್ರವಾಚಕ ಬಲದೇವಾನಂದ ಸಾಗರಃ ", "ಪ್ರದೇಶ ಸಮಾಚಾರ ಓದುತ್ತಿರುವವರು ಚಾಮರಾಜ್.." ಎಂಬ ಸಾಲುಗಳು ಈಗಲೂ ಒಮ್ಮೊಮ್ಮೆ  ಕಿವಿಯಲ್ಲಿ ಪ್ರತಿಧ್ವನಿಸುತ್ತದೆ. 
ಇನ್ನು 'ಮಾತುಕತೆ'ಯಲ್ಲಿ ಮಾತನಾಡುತ್ತಿದ್ದ ನಾರಾಯಣಿ ದಾಮೋದರ್ ನಮ್ಮ ಪಕ್ಕದಲ್ಲಿದ್ದಾರೇನೋ ಎಂದು ಅನ್ನಿಸುತ್ತಿತ್ತು. 'ರಸವಾರ್ತೆ'ಯ ಸುದ್ದಿಗಳು ಕಚಗುಳಿಯಿಡುತ್ತಿದ್ದವು. 'ಕೋರಿಕೆ ' ಕಾರ್ಯಕ್ರಮದಲ್ಲಿ ಬರುತ್ತಿದ್ದ ಸಾಲು ಸಾಲು ಹೆಸರುಗಳು, ಅವರ ಮಾವ, ಇವರ ಮನೆಯವರು ಎಂಬಿತ್ಯಾದಿ ವಿಚಿತ್ರ ವಿಧದ ರಿಕ್ವೆಸ್ಟ್ ನಗು ತರಿಸುತ್ತಿತ್ತು. 
ಸಂಜೆಯಾಗುತ್ತಿದ್ದಂತೆ 'ಕೃಷಿರಂಗ', 'ಯುವವಾಣಿ' ಕಾರ್ಯಕ್ರಮಗಳು, ಅವುಗಳ ಥೀಮ್ ಟ್ಯೂನ್ ಗಳು ಇಂದಿಗೂ ಗುನುಗುಣಿಸುವಷ್ಟು ಮನಸ್ಸಿನಲ್ಲಿ ಹಚ್ಚಹಸುರಾಗಿವೆ... ಈ ಭೂಮಿ ಬಣ್ಣದ ಬುಗುರಿ, ಇಬ್ಬನಿ ತಬ್ಬಿದ ಇಳೆಯಲಿ, ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ, ಮುಂತಾದ ಮಧುರ ಹಾಡುಗಳನ್ನು 'ಚಿತ್ರಗೀತೆ'ಯಲ್ಲಿ ಕೇಳಿದ್ದು ಮರೆಯುವುದಾದರೂ ಹೇಗೆ? 
ಇಂದು ಟಿ.ವಿ, ಮೊಬೈಲುಗಳು ಇರುವ ನೆಮ್ಮದಿಯನ್ನೂ ಹಾಳುಮಾಡುತ್ತಿರುವಾಗ ಮನಸ್ಸು ಮತ್ತೆ ರೇಡಿಯೋವನ್ನು ಬಯಸುತ್ತಿದೆ. ಮನಸ್ಸಿನ ಮಾತಿಗೆ ಓಗೊಟ್ಟು ರೇಡಿಯೋ ಖರೀದಿಸಿ ಒಂದು ತಿಂಗಳಾಯಿತು.. ನನ್ನಷ್ಟಕ್ಕೆ ನಾನು ಖುಷಿಯಾಗಿದ್ದೇನೆ ಹಾಗೂ ಮುಂದೆಯೂ ಖುಷಿಯಾಗಿರುತ್ತೇನೆ..
-ಸುಚಿತ್ ಕೋಟ್ಯಾನ್ ಕುರ್ಕಾಲು