ಶುಕ್ರವಾರ, ಜೂನ್ 10, 2016

ಗ್ವಂತನಮೇರ ಗ್ವಜೀರಾ

ಕಳೆದೊಂದು ಹತ್ತು ದಿನಗಳಿಂದ ಇದೇ ಮಂತ್ರ ನನ್ನದು. ಕ್ಯೂಬಾ ದೇಶದ ಈ ಸ್ಪೆಷಲ್ ಹಾಡಿನ ಬಗ್ಗೆ ಮೊದಲು ಓದಿದ್ದು ನೇಮಿಚಂದ್ರರ 'ಪೆರುವಿನ ಪವಿತ್ರ ಕಣಿವೆಯಲ್ಲಿ' ಪುಸ್ತಕದಲ್ಲಿ. ಆಗಲೇ ಹಾಡು ಕೇಳಬೇಕೆಂದುಕೊಂಡಿದ್ದೆ. ಓದಿ ಮುಗಿಸುವ ಹೊತ್ತಿಗೆ ಹಾಡು ಸಿಕ್ಕಿತು.. ಮೊದಲ ಬಾರಿ ಕೇಳುವಾಗಲೇ ವಿಚಿತ್ರವೆನಿಸಿದರೂ ತುಂಬಾ ಖುಷಿಕೊಟ್ಟಿತ್ತು. ಆಪ್ತರೊಬ್ಬರಿಗೆ ಹಾಡನ್ನು ಕಳಿಸಿದಾಗ "ಒಳ್ಳೆ ನಿದ್ರೆ ಬರುತ್ತೆ" ಆಂದ್ರು. ಅದು ಸತ್ಯವೂ ಹೌದು. ಹಾಡನ್ನು ಅರ್ಥಮಾಡಿಕೊಂಡ್ರೆ ಇನ್ನಷ್ಟು ಆಪ್ತವಾಗಬಹುದು ಎಂದು ಅರ್ಥ ಹುಡುಕುವ ಪ್ರಯತ್ನಕ್ಕಿಳಿದೆ..

ನೇಮಿಚಂದ್ರರು ಈ ಹಾಡಿನ ಬಗ್ಗೆ ಮೊದಲು ಕೇಳಿದ್ದು ಜಿ.ಎನ್.ಮೋಹನ್ ರವರ 'ನನ್ನೊಳಗಿನ ಹಾಡು ಕ್ಯೂಬಾ' ಪುಸ್ತಕದಲ್ಲಿ.. ಹಾಗಾಗಿ ಅದರಲ್ಲಿ ಅರ್ಥವಿರಬಹುದು ಎಂದು ಆ ಪುಸ್ತಕವನ್ನು ಹುಡುಕಿದಾಗ ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ. ಆ ಹಾಡು ಒಂದರ್ಥದಲ್ಲಿ ಇಡೀ ಕ್ಯೂಬನ್ನರನ್ನು ಒಂದುಗೂಡಿಸಿತ್ತು.. ಎರಡನೇ ರಾಷ್ಟ್ರಗೀತೆಯಂತೆ ಈ ಹಾಡು ಕ್ಯೂಬಾದಲ್ಲಿ ಪ್ರಸಿದ್ದವಾಗಿತ್ತು, ಇಡೀ ವಿಶ್ವದ ಗಮನವನ್ನೂ ಸೆಳೆದಿತ್ತು...

ಇಡೀ ಕ್ಯೂಬಾದಲ್ಲಿ ಎಲ್ಲಿಯೇ ಹೋದರೂ ಈ ಹಾಡು ಕೇಳಿಬರುತ್ತಂತೆ. ಅಮೇರಿಕಾದ ಸ್ವಾರ್ಥ ರಾಜಕೀಯಕ್ಕೆ ಬಲಿಯಾಗುತ್ತಿರುವ ಕ್ಯೂಬಾ ದೇಶಕ್ಕೆ ಹೋರಾಟದ ಹಾದಿಯಲ್ಲಿ ಸಾಂತ್ವನ ನೀಡಿದ್ದು ಈ ಪ್ರೇಮಗೀತೆ 'ಗ್ವಂತನಮೇರ'..

'ನಾನು ತಾಳೆ ಬೆಳೆಯುವ ನಾಡಿನ ಒಳ್ಳೆಯ ಹುಡುಗ' ಎಂಬ ಅರ್ಥದ ಈ ಹಾಡು ಹುಟ್ಟಿದ್ದು ಬರೀ ಎರಡು ಸಾಲು ಮಾತ್ರ. ಮುಂದಕ್ಕೆ ಇದು ಫೇಮಸ್ಸಾದ ಮೇಲೆ ಸಾಲುಗಳು ಸೇರುತ್ತಾ ಹೋದವು. 1929 ರಲ್ಲಿ ಜೊಸೇಟೋ ಫೆರ್ನಾಂಡಿಸ್ ಈ ಮೊದಲ ಸೊಲ್ಲನ್ನು ಹುಟ್ಟುಹಾಕಿದ ಮೇಲೆ 12 ವರ್ಷಗಳ ಕಾಲ ಕ್ಯೂಬಾದ ರೇಡಿಯೋದಲ್ಲಿ ಈ ಹಾಡು ಸತತವಾಗಿ ಕೇಳಿಬಂತಂತೆ. ಮುಂದಕ್ಕೆ ಗಡಿಯ ಎಲ್ಲೆಗಳನ್ನು ಮೀರಿ ಜಗತ್ತಿನಾದ್ಯಂತ ಈ ಹಾಡು ಪ್ರಸಿದ್ಧಿಯಾಯಿತು..

ಹಾಡಿನ ಬಗ್ಗೆ ಹೆಚ್ಚು ಹೇಳುವುದಕ್ಕಿಂತ ಮೇಲೆ ಹೇಳಿದ ಈ ಎರಡು ಪುಸ್ತಕಗಳನ್ನು ಓದಿಕೊಂಡರೆ ಹೆಚ್ಚು ಸ್ಪಷ್ಟವಾಗಿ ಅರ್ಥವಾಗುತ್ತದೆ. ಪುರುಸೊತ್ತು ಮಾಡಿಕೊಂಡು ಓದಿ..

ಮನೆಯಲ್ಲಿ ಅಮ್ಮನ ಬೈಗುಳ.. 'ಅದೆಂತ ಹಾಡು ನಿನ್ನದು..ಭಾಷೆಯಿಲ್ಲದ ಹಾಡು ಹಾಡಿ ಕಿರಿಕಿರಿ ಮಾಡ್ಬೇಡ..'

ಆದರೆ ಹಾಡಿನ ಹಿಂದಿನ ಭಾವ ನನಗರ್ಥವಾದ ಮೇಲೆ ಹಾಡಿನ ಭಾಷೆ ಮುಖ್ಯವಲ್ಲವೆನಿಸುತ್ತಿದೆ...

ಅಮೇರಿಕಾದ ಕವಿ Henry Wadsworth ಹೇಳಿದಂತೆ "Music is the Universal language.." ಅಲ್ವಾ?

- ಸುಚಿತ್ ಕೋಟ್ಯಾನ್ ಕುರ್ಕಾಲು

ಸೋಮವಾರ, ಏಪ್ರಿಲ್ 25, 2016

ಮರೆಯಾದ ಮಹಾನ್ ಚೇತನ ಎಂ.ವಿ.ಕಾಮತ್94 ಇಳಿವಯಸ್ಸಿನಲ್ಲೂ ಮುಖದಲ್ಲಿ ನಗು ಎಂದಿಗೂ ಮಾಯವಾಗಿರಲಿಲ್ಲ. ಅವರ ಜೀವನಶೈಲಿಯಲ್ಲಾಗಲೀ ಅಥವಾ ಬರೆಯುವ ಲೇಖನಗಳಲ್ಲಾಗಲೀ ಅವರಿಗೆ ವಯಸ್ಸಾಗಿದೆ ಅನ್ನುವ ಲವಲೇಶವೂ ಯಾವತ್ತೂ ಕಾಣಸಿಗಲಿಲ್ಲ. ಅವರ ಅಗಲುವಿಕೆಯಿಂದ ಪತ್ರಿಕೋದ್ಯಮದ ದಂತಕತೆಯೊಂದು ಕಳಚಿಕೊಂಡಿದೆ. ಪತ್ರಿಕೋದ್ಯಮ ಜಗತ್ತಿಗೆ ಹೊಸ ಭಾಷ್ಯ ಬರೆದ ಎಂ.ವಿ.ಕಾಮತರಿಲ್ಲದೆ ಇಂದು ಮಾಧ್ಯಮ ಜಗತ್ತು ಶೂನ್ಯವಾಗಿದೆ.ಮಣಿಪಾಲದಲ್ಲಿರುವ ಪ್ರತಿಷ್ಠಿತ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್‌ನಲ್ಲಿರುವ ಕಾಮತರ ಆಫೀಸ್ ಕೋಣೆ ಹೊಕ್ಕರೆ ನಮಗೊಂದು ಹೊಸ ಅನುಭವ ಸಿಗುತ್ತಿತ್ತು. ಅದು ಒಮ್ಮೆ ಲೈಬ್ರೆರಿಯಂತೆ ಕಂಡರೆ ಮತ್ತೊಮ್ಮೆ ಮ್ಯೂಸಿಯಂನಂತೆ ಗೋಚರಿಸುತ್ತದೆ. ವಿಶಾಲವಾದ ಕಪಾಟಿನಲ್ಲಿ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಕಾಮತರು ಒಂದನ್ನೂ ಓದದೆ ಬಿಟ್ಟಿರಲಿಕ್ಕಿಲ್ಲ ಎಂದು ಅಂದುಕೊಳ್ಳುತ್ತಿದ್ದೆವು. ಅವರು ಕುಳಿತುಕೊಳ್ಳುವ ಸ್ಥಳದ ಮುಂದಿರುವ ಮೇಜು ಸಾಕಷ್ಟು ದೊಡ್ಡದಾಗಿದ್ದು ಎದುರಲ್ಲೇ ಪುಟ್ಟದಾದ ಪೋರ್ಟೇಬಲ್ ಟೈಪ್‌ರೈಟರ್ ಕಾಣಸಿಗುತ್ತದೆ. ಅದರ ಬಗ್ಗೆ ವಿಚಾರಿಸಿದರೆ ದೊಡ್ಡದೊಂದು ನಗು ಕಾಮತರ ಮುಖದಲ್ಲಿ. ಎಲ್ಲರೂ ಅದರ ಬಗ್ಗೆ ಕೇಳುತ್ತಾರಂತೆ. ಕಾಮತರಿಗೆ ಟೈಪ್‌ರೈಟರ್ ಬಹಳ ಆತ್ಮೀಯವಾದದ್ದು. ಅವರೇ ಹೇಳುವಂತೆ ಅದು ಅವರ ಗರ್ಲ್‌ಫ್ರೆಂಡ್. ಬಹಳ ಹಿಂದಿನಿಂದಲೂ ಕಾಮತರು ಅದರಲ್ಲಿ ಲೇಖನಗಳನ್ನು ಟೈಪ್ ಮಾಡುತ್ತಿದ್ದರು. ಕೊನೆಯ ದಿನದ ವರೆಗೂ ಬಳಸುತ್ತಿದ್ದರು. ಅದರಲ್ಲೇ ನನಗೊಂದು ವೈಯಕ್ತಿಕ ಪತ್ರ ಬರೆದು ಪೋಸ್ಟ್ ಮಾಡಿದ್ದಾರೆ. ಇದಲ್ಲದೇ ಮೂಲೆಯಲ್ಲೊಂದು ಲ್ಯಾಪ್‌ಟಾಪ್, ಒಂದಷ್ಟು ಪೇಪರ್, ಪೆನ್ನು, ಹಾಗೂ ದಿನಪತ್ರಿಕೆಯ ತುಣುಕುಗಳ ಒಂದು ದೊಡ್ಡ ರಾಶಿಯೇ ಅವರ ಮೇಜಿನಲ್ಲಿತ್ತು. ಪತ್ರಿಕೆ ಓದುವಾಗ ಯಾವುದೇ ವಿಷಯ ಸಂಗ್ರಹಯೋಗ್ಯ ಎನಿಸಿದರೆ ಅದನ್ನು ಕತ್ತರಿಸಿ ಜೋಪಾನವಾಗಿಟ್ಟುಕೊಳ್ಳುತ್ತಿದ್ದರು. ಮುಂದಕ್ಕೆ ತಮ್ಮ ಲೇಖನಗಳಲ್ಲಿ ಪೂರಕವಾಗಿ ಅವುಗಳನ್ನು ಬಳಸುತ್ತಿದ್ದರು. ಇದು ಅವರು ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬಂದ ಪರಿಪಾಠ.

ಕಾಮತರು ದಿನಕ್ಕೆ ಏನಿಲ್ಲವೆಂದರೂ ಹತ್ತು ದಿನಪತ್ರಿಕೆಗಳನ್ನು ಓದುತ್ತಿದ್ದರು. ಈವರೆಗೆ ಅವರು ಬರೆದ ಲೇಖನಗಳೆಷ್ಟೋ, ಸ್ವತಃ ಅವರಿಗೇ ನೆನಪಿಲ್ಲ. ಇಳಿ ವಯಸ್ಸಿನಲ್ಲಿಯೂ ಫ್ರೀ ಪ್ರೆಸ್ ಜರ್ನಲ್, ಜನ್ಮಭೂಮಿ, ಹಿತವಾದ, ಆರ್ಗನೈಸರ್, ಸೆಂಟಿನಲ್, ನ್ಯೂಸ್ ಟುಡೇ, ಉದಯವಾಣಿ, ಆಫ್ಟರ್‌ನೂನ್ ಡಿಸ್ಪ್ಯಾಚ್ & ಕೊರಿಯರ್, ಹನ್ಸ್ ಇಂಡಿಯಾ ಪತ್ರಿಕೆಗಳಿಗೆ ನಿರಂತರವಾಗಿ ಅಂಕಣಗಳನ್ನು ಬರೆಯುತ್ತಿದ್ದರು. ಅವರ ಅಂಕಣಗಳ ವಿಶೇಷವೆಂದರೆ ಅದರಲ್ಲಿ ಅಡಕವಾಗಿರುವ ಮೌಲ್ಯಗಳು ಹಾಗೂ ಅವರು ಎತ್ತುವ ಮಹತ್ವದ ವಿಚಾರಗಳು. ಅವರ ಪ್ರತೀ ಅಂಕಣ ಬರಹದಲ್ಲಿಯೂ ಸಾಕಷ್ಟು ಅಂಕಿ-ಅಂಶಗಳು, ಪೂರಕ ದಾಖಲೆಗಳು ಇದ್ದೇ ಇರುತ್ತವೆ. ಇದಕ್ಕೆಲ್ಲಾ ಅವರು ಓದುವ ಪತ್ರಿಕೆಗಳು ಹಾಗೂ ಅವರ ವಿಷಯ ಸಂಗ್ರಹ ಶೈಲಿಯೇ ಮೂಲ ಕಾರಣ.

ಮಾಧವ ವಿಟ್ಠಲ ಕಾಮತರು ಹುಟ್ಟಿದ್ದು ಉಡುಪಿಯಲ್ಲಿ; ಇಲ್ಲಿಯ ಓರ್ವ ಖ್ಯಾತ ವಕೀಲರ ಮಗನಾಗಿ ಸಪ್ಟೆಂಬರ್ 7, 1921ರಲ್ಲಿ ಜನಿಸಿದರು. ಕಾಮತರ ಬಾಲ್ಯದ ದಿನಗಳು ಅತ್ಯಂತ ಸುಂದರವಾಗಿಯೂ, ಸ್ಮರಣೀಯವಾಗಿಯೂ ಇದ್ದವು. ಉಡುಪಿಗೆ ಗಾಂಧೀಜಿಯವರು ಭೇಟಿಕೊಟ್ಟಾಗ ಕಾಮತರ ತಂದೆ ಮುಂದಾಳತ್ವ ವಹಿಸಿದ್ದು, ಮೋತಿಲಾಲ್ ನೆಹರೂ ತೀರಿಕೊಂಡಾಗ ಉಡುಪಿಯಲ್ಲಿ ನಡೆದ ಶೋಕ ಮೆರವಣಿಗೆಯಲ್ಲಿ ಪುಟಾಣಿ ಕಾಮತರನ್ನು ಆನೆಯ ಮೇಲೆ ಕುಳ್ಳಿರಿಸಿ ಕೈಗೊಂದು ಮೋತಿಲಾಲರ ಫೋಟೋ ಕೊಟ್ಟು ಮುಂದೆ ಸಾಗುವಂತೆ ಮಾಡಿದ್ದು, ಕಾಮತರು ಆನೆಯ ಮೇಲೆ ಹೆದರಿ ಮೈ ಬೆವತು ಇನ್ನೆಂದೂ ಇಂತಹ ದುಸ್ಸಾಹಸ ಮಾಡಬಾರದೆಂದು ನಿಶ್ಚಯಿಸಿದ್ದು, ಗೋಟಿ- ಗಿಲ್ಲಿದಾಂಡು ಆಡಿ, ಗಾಳಿಪಟ ಹಾರಿಸಿ ಮಜಾ ಮಾಡಿದ್ದು, ಮುಂತಾದ ಅನುಭವಗಳು ಬಹಳ ರಸವತ್ತಾಗಿ ಅವರ ನೆನಪಿನಂಗಳದಿಂದ ಮೂಡಿಬರುತ್ತಿತ್ತು. ಅದನ್ನೆಲ್ಲಾ ಹೇಳಿ ಯಾವಾಗಲೂ ನಗಿಸುತ್ತಿದ್ದರು, ತಾವೂ ನಕ್ಕು ಹಗುರಾಗುತ್ತಿದ್ದರು.ಕಾಮತರು ಡಾಕ್ಟರರಗಬೇಕೆಂದು ಆಸೆಪಟ್ಟವರು. ಮುಂಬಯಿಯಲ್ಲಿ ಬಿ.ಎಸ್ಸಿ ಮಾಡಿ ಕೆಮಿಸ್ಟರಾದವರು. ಡಾಕ್ಟರರಾಗಲು ಬಹಳ ಪ್ರಯತ್ನಪಟ್ಟು ನಂತರ ಅಸಾಧ್ಯವಾದಾಗ ಸಮುದ್ರತೀರದಲ್ಲಿ ಕೂತು ಬಹಳ ಅತ್ತವರು. ಉದ್ಯೋಗ ಬಿಟ್ಟು ರಸ್ತೆಯ ಬದಿಯಲ್ಲಿ ಬ್ಯಾಗ್ ಮಾರಿದವರು. ಶಿಕ್ಷಕ ವೃತ್ತಿಯನ್ನೂ ಮಾಡಿ ಕೆಲಕಾಲ ಮಕ್ಕಳಿಗೆ ಪಾಠಮಾಡಿದವರು. ಒಮ್ಮೆ ರಾಮಕೃಷ್ಣ ಮಿಶನ್ ಸೇರಿ ಸನ್ಯಾಸಿಯಾಗಬೇಕೆಂದೂ ಬಯಸಿದವರು!. ಆದರೆ ಕಾಮತರ ಹಣೆಯಲ್ಲಿ ಬೇರೆಯೇ ಬರೆದಿತ್ತು. ಪತ್ರಕರ್ತನಾಗುವತ್ತ ಕಾಮತರು ಒಲವು ತೋರಿ ಅಂದಿನ ಕ್ರಾಂತಿಕಾರಿ ಧೇಶಭಕ್ತ ಪತ್ರಿಕೆ 'ಫ್ರೀ ಪ್ರೆಸ್ ಜರ್ನಲ್'ಗೆ 100 ರೂಪಾಯಿಗೆ ವರದಿಗಾರನಾಗಿ ಸೇರಿದರು. ಮುಂದೆ ಪತ್ರಕರ್ತನಾಗಿ ಬೆಳೆದು ಒಂದೊಂದೇ ಮೆಟ್ಟಿಲು ಹತ್ತಿ ಯಶಸ್ಸಿನ ಉತ್ತುಂಗಕ್ಕೇರಿದರು.

ಕಾಮತರು ಓರ್ವ ಅಪ್ಪಟ ದೇಶಭಕ್ತನಾಗಿದ್ದರು. ಪತ್ರಿಕೆ ಸೇರುವುದಕ್ಕಿಂತ ಮುಂಚೆ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕರ್ತನಾಗಿ ದುಡಿದಿದ್ದರು. ನಂತರದ ದಿನಗಳಲ್ಲಿ ತಮ್ಮ ಬರಹಗಳಲ್ಲಿ ಹೊಳಪು ಸಾಧಿಸಿಕೊಂಡಂತೆ ರಾಷ್ಟ್ರಪ್ರೇಮ, ದೇಶದ ಕುರಿತಾದ ಅವರ ಅನಿಸಿಕೆಗಳು ಬಹಳ ಪರಿಣಾಮಕಾರಿಯಾಗಿ ಅವರ ಲೇಖನಗಳಲ್ಲಿ ಗೋಚರಿಸತೊಡಗಿದವು. 1947ರಲ್ಲಿ ಆಗಸ್ಟ್ 14ರ ಮಧ್ಯರಾತ್ರಿ ಸ್ವಾತಂತ್ರ್ಯ ದೊರಕಿದ ಸಂದರ್ಭವನ್ನು ಸ್ಥಳದಲ್ಲಿದ್ದುಕೊಂಡು ವರದಿ ಮಾಡಿದ ಬಗ್ಗೆ ಹೇಳುವಾಗ ಕಾಮತರ ಮುಖ ಅರಳುತ್ತದೆ. ಕಣ್ಣೀರು ಅವರಿಗರಿವಿಲ್ಲದಂತೆಯೇ ಜಿನುಗುತ್ತದೆ. ವರದಿಯನ್ನು ಮಾಡಿದ ಪತ್ರಕರ್ತರಲ್ಲಿ ಇಂದು ಬದುಕಿರುವವರು ಕಾಮತರೊಬ್ಬರೇ. ಇದಲ್ಲದೆ ನಾಥೂರಾಮ್ ಗೋಡ್ಸೆಯ ಟ್ರಯಲ್ ವರದಿ ಮಾಡಿದ್ದು, `ಕಾಶ್ಮೀರದ ಹುಲಿ' ಶೇಕ್ ಅಬ್ದುಲ್ಲಾ ಬಂಧನದ ವರದಿ ಮಾಡಲು ಅಪಾಯವನ್ನು ಲೆಕ್ಕಿಸದೆ ಶ್ರೀನಗರಕ್ಕೆ ತೆರಳಿದ್ದು, ಭಾರತ ಸೇರಿ ವಿಶ್ವದ ಅಗ್ರಗಣ್ಯ ನಾಯಕರನ್ನೆಲ್ಲಾ ಸಂದರ್ಶಿಸಿದ್ದು, ಮುಂತಾದವುಗಳು ಇವರ ವೃತ್ತಿ ಬದುಕಿನ ಕೆಲವು ರೋಮಾಂಚಕಾರಿ ಅನುಭವಗಳು. ಪಿಟಿಐ ಕರೆಸ್ಪಾಂಡೆಂಟ್ ಆಗಿ ಅಮೇರಿಕಾ, ಟೈಮ್ಸ್ ಆಫ್ ಇಂಡಿಯಾದ ವಕ್ತಾರನಾಗಿ ಜರ್ಮನಿ, ಪ್ಯಾರಿಸ್‌ನಲ್ಲಿ ದುಡಿದವರಿವರು. ಇಲ್ಲಸ್ಟ್ರೇಟೆಡ್ ವೀಕ್ಲಿಯ ಸಂಪಾದಕತ್ವ, ಪ್ರಸಾರ ಭಾರತಿಯ ಅಧ್ಯಕ್ಷ ಹುದ್ದೆಯಂತಹ ಅತ್ಯುನ್ನತ ಪದವಿಗಳನ್ನೂ ಕಾಮತರು ಅಲಂಕರಿಸಿದ್ದಾರೆ. ಅಂದಿನ 'ಇಲ್ಲಸ್ಟ್ರೇಟೆಡ್ ವೀಕ್ಲಿ' ಗುಣಮಟ್ಟ ಇಂದಿಗೂ ಎಲ್ಲೆಡೆಗಳಲ್ಲಿ ಪ್ರಶಂಸೆಗೊಳಗಾಗುತ್ತಿರುವುದು ಕಾಮತರ ವೃತ್ತಿ ತತ್ಪರತೆಗೊಂದು ಸಾಕ್ಷಿ.

ಕಾಮತರ ಕನ್ನಡ ಪ್ರೇಮ:
ಕನ್ನಡದ ಮಣ್ಣಲ್ಲಿ ಹುಟ್ಟಿದ ಕನ್ನಡದ ಕುವರ ಎಂ.ವಿ.ಕಾಮತ್. ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಮಾತೃಭೂಮಿಯ, ಮಾತೃಭಾಷೆಯ ಋಣವನ್ನು ಕಾಮತರೆಂದೂ ಮರೆತಿಲ್ಲ. ಸರಿಸುಮಾರು ಸ್ವಾತಂತ್ರ್ಯ ದೊರೆತ ಕಾಲದಲ್ಲಿ ಕಾಮತರು ತನ್ನ ಗೆಳೆಯರಾದ ಹನುಮೇಶ, ರಾಮಚಂದ್ರ ಮತ್ತು ಸೋಮನಾಥರ ಜೊತೆಗೂಡಿ ಮುಂಬೈಯಲ್ಲಿ `ನುಡಿ' ಎಂಬ ಕನ್ನಡ ಪತ್ರಿಕೆ ಆರಂಭಿಸಿದ್ದರು. ಮುಂದೆ ಅಲ್ಪಕಾಲದಲ್ಲಿ `ನುಡಿ' ಮುಂಬೈ ಕನ್ನಡಿಗರ ಅಚ್ಚುಮೆಚ್ಚಿನ ಪತ್ರಿಕೆಯಾಯಿತು. ಅಂದು ಕಾಸರಗೋಡಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ಣ ವರದಿ, ಕನ್ನಡ ಗ್ರಂಥಗಳ ವಿಮರ್ಶೆಯೂ ಹೊಸ ಪತ್ರಿಕೆಯಲ್ಲಿ ಪ್ರಕಟಗೊಂಡವು. ಅವೆಲ್ಲಾ ಕಾಲಕ್ಕೆ ಕನ್ನಡ ಪತ್ರಿಕೋದ್ಯಮದಲ್ಲೇ ಹೊಸದೊಂದು ಆವಿಷ್ಕಾರವಾಗಿತ್ತು. ಖ್ಯಾತ ಕಾದಂಬರಿಕಾರ ವ್ಯಾಸರಾಯ ಬಲ್ಲಾಳರು ಸೇರಿದಂತೆ ಅನೇಕರು ಪತ್ರಿಕೆಗೆ ಲೇಖನಗಳನ್ನು ಬರೆದರು. ಪತ್ರಿಕೆ ಇಷ್ಟೆಲ್ಲಾ ವೈವಿಧ್ಯಗಳನ್ನು ಹೊಂದಿದ್ದರೂ ಆರ್ಥಿಕವಾಗಿ ಸುಧಾರಿಸಲಿಲ್ಲ. ಮುಂದಕ್ಕೆ ಅದು 'ಫ್ರೀ ಪ್ರೆಸ್' ಆಡಳಿತದಡಿಯಲ್ಲಿ ಬಂತು. ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿ 1950 ರ ಆಗಸ್ಟ್‌ನಲ್ಲಿ ಪತ್ರಿಕೆ ನಿಂತು ಹೋಯಿತು. 'ನುಡಿ' ಪತ್ರಿಕೆ ಕಾಮತರ ಹಾಗೂ ಅವರ ಗೆಳೆಯರ ಕಿಸೆಗಳನ್ನು ಕೊರೆದರೂ ಕನ್ನಡ ಪತ್ರಿಕೆಯೊಂದನ್ನು ಸ್ಥಾಪಿಸಿ, ಅದಕ್ಕಾಗಿ ದುಡಿದ ಸಂತೃಪ್ತ ಮನೋಭಾವ ಕಾಮತರಲ್ಲಿದೆ.

ಕಾಮತರು ಪತ್ರಕರ್ತನಾಗಿ ದೇಶಕ್ಕೆ ಸಲ್ಲಿಸಿದ ಅಮೋಘ ಸೇವೆಯನ್ನು ಪರಿಗಣಿಸಿ ಸರಕಾರ ಅವರಿಗೆ 2004ರಲ್ಲಿ ಪ್ರತಿಷ್ಠಿತ 'ಪದ್ಮಭೂಷಣ' ಪ್ರಶಸ್ತಿಯಿತ್ತು ಗೌರವಿಸಿದೆ. ಮಂಗಳೂರು ವಿವಿಯಿಂದ 2007ರಲ್ಲಿ ಗೌರವ ಡಾಕ್ಟರೇಟ್ ಇವರಿಗೆ ಸಂದಿದೆ. ಇದಲ್ಲದೆ 2011 ರಲ್ಲಿ `ಶ್ರೇಷ್ಠ ಕೊಂಕಣಿಗ' ಪ್ರಶಸ್ತಿಗೂ ಕಾಮತರು ಭಾಜನರಾಗಿದ್ದಾರೆ. ವೃತ್ತಿಯಿಂದ ನಿವೃತ್ತರಾದರೂ ಬರವಣಿಗೆಯ ನಂಟನ್ನು ಕಾಮತರು ಬಿಟ್ಟಿಲ್ಲ. ಪತ್ರಿಕೆಗೆ ಅಂಕಣಗಳನ್ನು ಬರೆಯುವುದರ ಜೊತೆಗೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲಿ ಆಧ್ಯಾತ್ಮದಿಂದ ಹಿಡಿದು ಬ್ಯಾಂಕ್ ಚರಿತ್ರೆಯವರೆಗೆ ಎಲ್ಲವೂ ಬಂದು ಹೋಗಿದೆ. ಈವರೆಗೆ ಅವರು ಬರೆದಿರುವ ಒಟ್ಟು ಕೃತಿಗಳ ಸಂಖ್ಯೆ 46. ಇದಲ್ಲದೆ 2 ಗ್ರಂಥಗಳ ಸಂಪಾದನೆ, ಕೃತಿಗಳಿಗೆ ಬೇರೆ ಬೇರೆ ಅಧ್ಯಾಯಗಳನ್ನು ಬರೆದಿದ್ದಾರೆ. ಪೈಕಿ ಅವರ 'ಸಾಯಿಬಾಬಾ ಆಫ್ ಶಿರಡಿ' 24 ಬಾರಿ ಮರುಮುದ್ರಣ ಕಂಡಿದ್ದು ಒಂದು ದಾಖಲೆಯಾದರೆ, ಬ್ಯಾಂಕ್‌ಗಳ ಚರಿತ್ರೆ ಬರೆದದ್ದು ಒಂದು ವಿಶ್ವದಾಖಲೆಯಾಗಿದೆ.ಕಾಮತರು ಜೀವನದುದ್ದಕ್ಕೂ ಮೌಲ್ಯಗಳನ್ನು ಪಾಲಿಸಿಕೊಂಡು ಬಂದು ಯಾವುದಕ್ಕೂ ರಾಜಿಮಾಡಿಕೊಳ್ಳದೆ ಬದುಕಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲೇ ಪತ್ರಿಕಾರಂಗಕ್ಕೆ ಬಂದು ವಿವಿಧ ತಲೆಮಾರುಗಳ ಜೊತೆ ಕೆಲಸಮಾಡಿರುವ ಕಾಮತರಿಗೆ ಪ್ರಸಕ್ತ ಪತ್ರಿಕೋದ್ಯಮ ಸೇರಿದಂತೆ ಇಡೀ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಬೇಸರವಿದೆ. ತಮ್ಮ ಕೊನೆಯ ಲೇಖನದ ವರೆಗೆ ಸರಕಾರ ಆದರ್ಶಗಳನ್ನು ಮರೆತಾಗ, ಜನರು ತಮ್ಮ ಸಂಸ್ಕೃತಿಯನ್ನು ಮೂಲೆಗಿಟ್ಟಾಗ ಪ್ರಖರವಾಗಿ ಖಂಡಿಸಿ ಲೇಖನಗಳನ್ನು ಬರೆದು ತನ್ನ ಸಾಮಾಜಿಕ ಜವಾಬ್ದಾರಿಯನ್ನು ತೋರ್ಪಡಿಸಿದ್ದಾರೆ. ಅವರ ವಿಚಾರಧಾರೆಗಳು ಪತ್ರಿಕೋದ್ಯಮದ ಮೆಟ್ಟಿಲು ಹತ್ತುತ್ತಿರುವ ಮರಿಪತ್ರಕರ್ತರಿಗೊಂದು ಆದರ್ಶ. `ಪತ್ರಿಕೋದ್ಯಮವೆಂದರೆ ಇದು' ಎಂದು ತನ್ನ ಜೀವನದ ಮೂಲಕ, ವಿಚಾರವಾದೀ ಬರಹಗಳ ಮೂಲಕ ಹಾಗೂ ತನ್ನ ಕಟುನಿಲುವುಗಳ ಮೂಲಕಗಳ ಎಲ್ಲರಿಗೂ ತೋರಿಸಿಕೊಟ್ಟಿವರು ಇಂದು ನಮ್ಮೊಂದಿಗಿಲ್ಲ. ಹಿರಿಯರೊಬ್ಬರು ಗತಿಸಿದರೆ ಲೈಬ್ರೆರಿಯೊಂದು ಸುಟ್ಟು ಬೂದಿಯಾದಂತೆ ಎಂದು ಆಫ್ರಿಕನ್ ಗಾದೆಯೋದು ಹೇಳುತ್ತದೆ. ಮರೆಯಾಗುತ್ತಿರುವ ಪತ್ರಿಕೋದ್ಯಮದ ತತ್ವ-ಸಿದ್ಧಾಂತಗಳು, ಪತ್ರಕರ್ತರಲ್ಲಿನ ಬದ್ಧತೆಯ ಕೊರತೆ ಇವೆಲ್ಲದರ ನಡುವೆ ನಮ್ಮನ್ನಗಲಿದ ಪತ್ರಿಕೋದ್ಯಮದ ಭೀಷ್ಮನಿಗೊಂದು ಗೌರವದ ಸೆಲ್ಯೂಟ್.

ಸ್ಕೂಟರ್ ಮತ್ತು ಕಾರು 'ಕಾರ್ಟರ್' ಆದಾಗ..


                ಆಯಸ್ಸು ಮುಗಿದ ಮೇಲೆ ಮನುಷ್ಯ ಲೋಕದಿಂದ ಅದೃಶ್ಯನಾಗುತ್ತಾನೆ. ಅದರಂತೆಯೇ ಆತ ಸೃಷ್ಟಿಸಿದ ವಸ್ತುಗಳೂ ಕೂಡಾ ಹಳತಾದ ಮೇಲೆ ಗುಜರಿ ಸೇರುತ್ತವೆ. ಆದರೆ ಇಲ್ಲೊಂದು ಕೈನೆಟಿಕ್ ಹೋಂಡಾ ಸ್ಕೂಟರ್ ಹಳತಾದ ಮೇಲೆ ಮರುಹುಟ್ಟು ಪಡೆದಿದೆ. ವಾಹನಗಳ ಜಗತ್ತಿನಲ್ಲೇ ಹೊಸ ಮಾದರಿಯಾಗಿ ಬದಲಾಗಿದೆ. ಹಿಂದಿಗಿಂತಲೂ ಹೆಚ್ಚು ಆಕರ್ಷಕವಾಗಿ ಎಲ್ಲರನ್ನೂ ಆಕರ್ಷಿಸುತ್ತಿದೆ.

                ಇದನ್ನು ಸ್ಕೂಟರ್ ಎನ್ನುವುದೋ ಅಥವಾ ಕಾರ್ ಎನ್ನುವುದೋ ಎಂಬ ಗೊಂದಲ ಮೂಡುವುದು ಸಹಜಬಹುಶಃ ಕಾರ್ ಮತ್ತು ಸ್ಕೂಟರ್‌ಗಳ ಸಮ್ಮಿಲನ ಇದಾಗಿರುವುದರಿಂದ 'ಕಾರ್ಟರ್' ಎನ್ನಬಹುದು! ಅಸಲಿಗೆ ಇಂಥದ್ದೊಂದು ವಾಹನ ಹಿಂದೆ ಸೃಷ್ಟಿಯಾದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಇಂತಹದೊಂದು ಹೊಸ ಪ್ರಯತ್ನಕ್ಕೆ ಕೈಹಾಕಿದವರು ಯಾವುದೋ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳೆಂದು ನೀವು ಊಹಿಸಿದ್ದರೆ ಅದು ತಪ್ಪು. ಹೊಸ ವಿನ್ಯಾಸ ಸೃಷ್ಟಿಸಿದ್ದು ಪುಟ್ಟದೊಂದು ಗ್ಯಾರೇಜಿನ ಮೆಕ್ಯಾನಿಕ್‌ಗಳು! ಸುಭಾಸ್‌ನಗರದ ವಾಜ್ ಗ್ಯಾರೇಜಿನ ರವಿ ಪೂಜಾರಿ ಹಾಗೂ ಅರುಣ್ ಸೋನ್ಸ್ ಎಂಬ ಇಬ್ಬರು ಯುವ ಉತ್ಸಾಹಿಗಳು ತಮ್ಮ ಹೊಟ್ಟೆಪಾಡಿನ ದುಡಿಮೆಯ ಜೊತೆಗೆ ಸಾಹಸಕ್ಕೆ ಕೈ ಹಾಕಿದ್ದರು. ಅವರ ಎರಡು ತಿಂಗಳ ಪರಿಶ್ರಮಕ್ಕೆ ಇಂದು ಅದ್ಭುತ ಪ್ರತಿಫಲ ಸಿಕ್ಕಿದೆ.

                ರವಿಯವರಿಗೆ ಸ್ಕೂಟರಿಗೊಂದು ಸ್ಟೇರಿಂಗ್ ಅಳವಡಿಸುವ ಕನಸು ಬಹಳ ಹಿಂದಿನಿಂದಲೂ ಇತ್ತು. ಗ್ಯಾರೇಜಿನಲ್ಲಿ ಘನ ವಾಹನಗಳ ಮೆಕ್ಯಾನಿಕ್ ಆಗಿದ್ದ ಅರುಣ್ ಸೋನ್ಸ್ ಇವರ ಜೊತೆಯಾದ ಮೇಲೆ ವಿಚಾರ ಅವರಿಗೆ ತಿಳಿದಾಗ ಇದನ್ನು ಕಾರ್ಯರೂಪಕ್ಕೆ ತರುವ ಪ್ಲ್ಯಾನ್ ಹಾಕಿದರಂತೆ. ಅದೇ ಸಮಯಕ್ಕೆ ಮಿತ್ರರೊಬ್ಬರಿಂದ ಗುಜರಿಗೆ ಸೇರಲು ಕಾಯುತ್ತಿದ್ದ ಕೈನೆಟಿಕ್ ಹೋಂಡಾ ಸಿಕ್ಕಿತು. ಯಾವುದೇ ಗುರುವಿನ ಬೆಂಬಲ, ಸಹಕಾರ ಇಲ್ಲದೇ ಬರೀ ಕನಸಿನ ಕಲ್ಪನೆಗಳನ್ನೇ ನನಸಾಗಿಸ ಹೊರಟ ಇವರ ಪ್ರಯೋಗ ಎಷ್ಟು ಅದ್ಭುತವಾಗಿ ಯಶಸ್ಸು ಕಂಡಿತೆಂದರೆ ವಾಹನ ಕೊಟ್ಟವರಿಗೂ ಗುರುತಿಸಲಾಗದ ಮಟ್ಟಿಗೆ ಹೊಸರೂಪ ಪಡೆಯಿತು. ಮೂಲ ಇಂಜಿನ್ iತ್ತು ಬಾಡಿ ಬಿಟ್ಟರೆ ಇದರಲ್ಲಿ ಎಲ್ಲವೂ ಹೊಸತು. ಕಾರು ಚಲಾಯಸಿದಂತೆ ಇದನ್ನು ಆರಾಮವಾಗಿ ಚಲಾಯಿಸಬಹುದು. ಕಾರಿನಲ್ಲಿರುವಂತೆಯೇ ಆಕ್ಸಿಲೇಟರ್ ಮತ್ತು ಬ್ರೇಕ್ ಪೆಡಲ್ ಮಾಡುವ ಸೌಲಭ್ಯ ಇದರಲ್ಲಿದೆ. ಸ್ಟಿಯರಿಂಗ್ ಪಕ್ಕದಲ್ಲೇ ತುರ್ತಾಗಿ ಒತ್ತಬಹುದಾದ ಹ್ಯಾಂಡ್‌ಬ್ರೇಕ್ ಇದೆ. ಗೇರ್ ಹಂಗಿಲ್ಲದೆ ಒಳ್ಳೆಯ ಪಿಕಪ್ ಕೊಡುತ್ತಿದೆ. ಬೈಕ್ ರೈಡಿಂಗ್, ರ್‍ಯಾಲಿಗಳನ್ನು ನೆನಪಿಸುವ ಎಚ್.ಆರ್.ಸಿ. ಸೈಲೆನ್ಸರ್ ಕೂಡಾ ಅಳವಡಿಸಿದ್ದಾರೆ. ಹೇಗೂ ರಸ್ತೆಗಿಳಿಸಲು ಪರ್ಮಿಶನ್ ಇಲ್ಲವಲ್ಲ!


                'ಕಾರ್ಟರ್' ಸೃಷ್ಟಿಯ ವೆಚ್ಚ ಅಂದಾಜು 25000 ರೂಪಾಯಿಗಳು. ಬೇರೆ ವಾಹನಗಳ ಆಲ್ಟರೇಶನ್‌ಗೆ ಹೋಲಿಸಿದರೆ ಇದು ತೀರಾ ಕಮ್ಮಿ. ಇದಕ್ಕೆ ಕಾರಣವೂ ಇದೆ. ಇಬ್ಬರೂ ಮೆಕ್ಯಾನಿಕ್‌ಗಳೇ ಇದರ ಸೃಷ್ಟಿಕರ್ತರಾಗಿರುವುದು ಒಂದೆಡೆಯಾದರೆ ಇವರ ಹಿತೈಷಿ ಡೇನಿಯಲ್ ಅಮ್ಮಣ್ಣ ವಾಹನ ತಯಾರಿಯ ಪ್ರತಿಯೊಂದು ಹಂತದಲ್ಲೂ ವೆಲ್ಡಿಂಗ್ ಇತ್ಯಾದಿ ಸಲಕರಣೆಗಳನ್ನು ನೀಡಿ ಹೆಚ್ಚಿನ ಹೊರೆಯಗದಂತೆ ಸಹಕರಿಸಿದ್ದಾರೆ. ವಾಹನವನ್ನು ಕಂಡ ಹಿರಿ-ಕಿರಿಯರೆಲ್ಲರೂ ಇದನ್ನು ಚಲಾಯಿಸಲು ಹಾತೊರೆಯುತ್ತಿರುವುದು ಹಾಗೂ ವಿಚಿತ್ರ ವಾಹನ ಚಲಾಯಿಸಿ ಖುಷಿಪಡುತ್ತಿರುವುದು ಗ್ಯಾರೇಜ್ ಯುವಕರಲ್ಲಿ ಸಂತಸ ತಂದಿದೆ; ಇನ್ನಷ್ಟು ಹೊಸ ಕನಸುಗಳು ಮೂಡತೊಡಗಿವೆ. ಇಂತಹ ವಾಹನಗಳಿಗೆ ಸದ್ಯಕ್ಕಂತೂ ಅನುಮತಿ ಸಿಗದಿದ್ದರೂ ಮುಂದೊಂದು ದಿನ 'ಕಾರ್ಟರ್' ರಸ್ತೆಗಿಳಿಯುತ್ತದೆ ಎಂಬ ನಂಬಿಕೆ ಇವರದು. ಅಂತಹಾ ದಿನಗಳು ಆದಷು ಬೇಗನೆ ಬರಲಿ ಹಾಗೂ ಕನಸು ಕಾಣುವ ಯುವ ಮನಸ್ಸುಗಳಿಗೆ ಇದೊಂದು ಪ್ರೇರಣೆಯಾಗಲಿ ಎಂಬುದೇ ನಮ್ಮ ಹಾರೈಕೆ.