ಸೋಮವಾರ, ಏಪ್ರಿಲ್ 25, 2016

ಸಾವಿರಾರು ಜೀವ ಉಳಿಸಿದ ಮಹಾತಾಯಿ


ಅದು 1920ರ ಕಾಲ. ಸಂಪ್ರದಾಯಸ್ಥರೇ ಹೆಚ್ಚಾಗಿ ನೆಲೆಸಿದ್ದ ಉಡುಪಿಯಲ್ಲಿ ವೈದ್ಯಕೀಯ ವ್ಯವಸ್ಥೆಗಳು ಹೆಚ್ಚಾಗಿ ಲಭ್ಯವಿರಲಿಲ್ಲ. ಕೆಲವೇ ಕೆಲವು ಪುರುಷ ವೈದ್ಯರನ್ನು ಹೊಂದಿದ್ದ ದವಾಖಾನೆಗಳಲ್ಲಿ ಮಹಿಳಾ ರೋಗಿಗಳನ್ನು ಪರೀಕ್ಷಿಸಲು ಪ್ರತ್ಯೇಕ ವ್ಯವಸ್ಥೆಯಿಲ್ಲದೆ ಜನಸಾಮಾನ್ಯರು ಪರದಾಡುವಂತಾಗಿತ್ತು. ಗರ್ಭಿಣಿಯರಿಗಂತೂ ಪ್ರಸವ ಕಾಲದಲ್ಲಿ ಸಾಕಷ್ಟು ತೊಂದರೆಗಳಾಗಿ ಬಾಣಂತಿ ಹಾಗೂ ಹಸುಗೂಸುಗಳ ಸಾವು-ನೋವುಗಳು ಸಂಭವಿಸುತ್ತಿತ್ತು. ಮಹಿಳಾ ಡಾಕ್ಟರ್ ಒಬ್ಬರು ಬಂದರೆ ನಮ್ಮೆಲ್ಲಾ iಸ್ಯೆಗಳು ನಿವಾರಣೆಯಾಗುತ್ತವೆ ಎಂಬುದು ಇವರೆಲ್ಲರ ದೈನಂದಿನ ಪ್ರಾರ್ಥನೆಯಾಗಿತ್ತು. ಕೊನೆಗೂ ದೇವರು ಇವರ ಪ್ರಾರ್ಥನೆಯನ್ನು ಲಾಲಿಸಿದನೆಂದು ಕಾಣುತ್ತದೆ. ಒಬ್ಬಾಕೆ ಮಹಿಳೆ ದೂರದೇಶದಿಂದ ಉಡುಪಿಗೆ ಬಂದಳು. ಮಹಿಳೆಯರ ಆರೋಗ್ಯಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಳು. ಆಕೆಯ ಹೆಸರು ಡಾ. ಈವಾ ಲೊಂಬಾರ್ಡ್.
ಈವಾ ಲೊಂಬಾರ್ಡ್ ಜನಿಸಿದ್ದು 1890ರಲ್ಲಿ. ಹುಟ್ಟೂರು ಸ್ವಿಟ್ಜರ್ಲ್ಯಾಂಡ್ ದೇಶದ ಜಿನೇವಾ. ಈಕೆಯ ತಂದೆ ಮೊದಲು ಬ್ಯಾಂಕ್ ಮ್ಯಾನೇಜರ್ ಆಗಿದ್ದವರು ನಂತರ ಕ್ರೈಸ್ತ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ಮಹಿಳಾ ಖೈದಿಗಳ ನಡುವೆ ಸೇವೆ ಸಲ್ಲಿಸುತ್ತಿದ್ದರು. ಹೆತ್ತವರ ಮೂಲಕ ಸೇವೆಯ ಶ್ರೇಷ್ಠತೆಯನ್ನು ಕಂಡ ಬಾಲೆ 14ರ ಹರೆಯದಲ್ಲಿಯೇ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತೇನೆಂದು ನಿರ್ಧರಿಸಿದಳು. 1918ರಲ್ಲಿ ಜಿನೇವಾ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದು ಬಾಸೆಲ್ ಮತ್ತು ಜಿನೇವಾದಲ್ಲಿ ಎರಡು ವರ್ಷ ವೃತ್ತಿಜೀವನ ನಡೆಸಿದರು. ಆದರೆ ಆಕೆಯಲ್ಲಿದ್ದ ತುಡಿತ ಬೇರೆಯೇ ಆಗಿತ್ತು. ವೈದ್ಯಕೀಯ ಸವಲತ್ತುಗಳಿಲ್ಲದೆ ಬಳಲುತ್ತಿರುವ ಬಡಜನರಿಗಾಗಿ ನಾನು ಸೇವೆ ಸಲ್ಲಿಸಬೇಕು ಎಂದು ಆಕೆ ನಿರ್ಧರಿಸದ್ದರು. ಹಾಗಾಗಿ 1921 ರಲ್ಲಿ ನೇರವಾಗಿ ಮೈಸೂರಿಗೆ ಬಂದರು.

ಉಡುಪಿಯಲ್ಲಿ
ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ಒಂದು ವರ್ಷಗಳ ಕಾಲ ಇಲ್ಲಿನ ಖಾಯಿಲೆಗಳು ಅದೇ ರೀತಿ ಇಲ್ಲಿನ ಆಚಾರ ವಿಚಾರಗಳು. ಭಾಷೆ ಮುಂತಾದವುಗಳನ್ನು ಅಭ್ಯಸಿಸಿದ ನಂತರ 1923 ರಲ್ಲಿ ಉಡುಪಿಗೆ ಬಂದರು. ಆಗ ಉಡುಪಿಯಲ್ಲಿ ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ಕರೆತರುವ ಪರಿಪಾಠವಿರಲಿಲ್ಲ. ಮನೆಯಿಂದ ಹೊರ ಕೊಟ್ಟಿಗೆಗಳಲ್ಲಿ ಹೆರಿಗೆ ಮಾಡಿಸಲಾಗುತ್ತಿತ್ತು. ಯಾಕೆಂದರೆ ಮಗುವಿಗೆ ಜನನ ನೀಡಿದ 40 ದಿನಗಳ ವರೆಗೆ ಅವರನ್ನು ಮೈಲಿಗೆಯ ದೃಷ್ಟಿಯಲ್ಲಿ ನೋಡಲಾಗುತ್ತಿತ್ತು. ಆದರೆ ಈವಾ ಡಾಕ್ಟರ್ ಬಂದ ಮೇಲೆ ಇದೆಲ್ಲವೂ ಬದಲಾಯಿತು. ಜೂನ್ 15, 1923ರಂದು ಉಡುಪಿಯಲ್ಲಿ 6 ಬೆಡ್ಗಳ ಮಿಷನ್ ಆಸ್ಪತ್ರೆಯನ್ನು ಆರಂಭಿಸಿದರು. ಇಬ್ಬರು ನರ್ಸ್, ಕೆಲವು ಸಹಾಯಕರು ಹಾಗೂ ಒಬ್ಬಾಕೆ ಡಾಕ್ಟರ್ ಇರುವ ಆಸ್ಪತ್ರೆ ಇದಾಗಿತ್ತು. ಮಹಿಳೆಯರಿಗಾಗಿ ಹಾಗೂ ಮಕ್ಕಳಿಗಾಗಿ ಆರಂಭಗೊಂಡ ಆಸ್ಪತ್ರೆ ಉಡುಪಿ ಆಸುಪಾಸಿನ ಜನರಿಗೆ ಬಹಳಷ್ಟು ಸಂತಸ ಹಾಗೂ ನೆಮ್ಮದಿ ತಂದಿತ್ತು. ದಿನದಿನವೂ ಜನರು 'ಅಮ್ಮ'ನನ್ನು ನೋಡಲು ಬರುತ್ತಿದ್ದರು. ಕೆಲವರು ಬರುತ್ತಿದ್ದದ್ದು ಚಿಕಿತ್ಸೆಗಾಗಿಯಾದರೆ ಇನ್ನು ಕೆಲವರಿಗೆ 'ಅಮ್ಮ' ಸೀರೆ ಉಡದೆ ಬೇರೆಯದೇ ರೀತಿಯ ಉಡುಪನ್ನು ಧರಿಸುವುದು ಸೋಜಿಗವಾಗಿ ಕಂಡದ್ದರಿಂದಲೂ ಅವರನ್ನು ನೋಡಲು ಬರುತ್ತಿದ್ದರು.
ಈವಾ ಲೊಂಬಾರ್ಡ್  ಬಂದ ನಂತರವೂ ಕೆಲವು ಹೆರಿಗೆಗಳು ಮನೆಯಲ್ಲೇ ನಡೆಯುತ್ತಿದ್ದವು. ಆಗೆಲ್ಲಾ ದಿಟ್ಟ  ಮಹಿಳೆ ದೂರವನ್ನೂ ಲೆಕ್ಕಿಸದೆ ನಡೆದುಕೊಂಡು ಹೋಗಿ, ಅಥವಾ ಕುದುರೆಗಾಡಿಯಲ್ಲಿ ಮುಂದಕ್ಕೆ ಕಾರಲ್ಲಿ ಸಾಗಿ ಮನೆಗಳಲ್ಲೇ ಹೆರಿಗೆ ನಡೆಸುತ್ತಿದ್ದರಂತೆ. ಹೆರಿಗೆಗಾಗಿ ಪ್ರತ್ಯೇಕ ವಾರ್ಡ್ ಅಗತ್ಯತೆಯನ್ನು ಅರಿತುಕೊಂಡ ಈವಾ 1925ರಲ್ಲಿ ಪ್ರತ್ಯೇಕ ಪ್ರಸೂತಿ ವಿಭಾಗ ಆರಂಭಿಸಿದರು. ಮುಂದಕ್ಕೆ ಮಕ್ಕಳ ವಾರ್ಡ್ಪುರುಷರ ವಾರ್ಡ್ಗಳು ಇಲ್ಲಿ ಅವರ ಕಾಲದಲ್ಲಿ ಪ್ರಾರಂಭಗೊಂಡವು. ಟಿಬಿ ಚಿಕಿತ್ಸೆಗಾಗಿ ಪ್ರತ್ಯೇಕ ವ್ಯವಸ್ಥೆ ಸ್ಯಾನಿಟೋರಿಯಂನ್ನು ಈಕೆಯೇ ಪ್ರಾರಂಭಿಸಿದರು.
ಮಕ್ಕಳು, ಮತ್ತು ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಗಮನವನ್ನು ಈವಾ ಲೊಂಬಾರ್ಡ್ ನೀಡುತ್ತಿದ್ದರು. ಸ್ವತಃ ತಾನೇ ಕಠಿಣ ಶ್ರಮಪಡುವುದರ ಜೊತೆಗೆ ತನ್ನ ಸಹೋದ್ಯೋಗಿಗಳು ಕೂಡಾ ಕರ್ತವ್ಯಬದ್ಧರಾಗಿರಬೇಕೆಂದು ಆಶಿಸುತ್ತಿದ್ದರು. 1954ರಲ್ಲಿ ತನ್ನ ಜವಾಬ್ದಾರಿಯನ್ನು ಭಾರತೀಯ ಡಾಕ್ಟರ್ಗೆ ವಹಿಸಿ 1957ರಲ್ಲಿ ಸ್ವಿಟ್ಜರ್ಲ್ಯಾಂಡ್ಗೆ ತೆರಳಿದರು. ಸರಳಜೀವನವನ್ನು ನಡೆಸುತ್ತಿದ್ದ ಅವರು ಮುಂದಕ್ಕೆ ಹಿರಿಯ ನಾಗರಿಕರ ಆಶ್ರಮವನ್ನು ಸೇರಿ 1978ರಲ್ಲಿ  ನಿಧನರಾದರು.
ಸೇವೆ ಮೆಚ್ಚಿದ ಡಾ.ಟಿ.ಎಂ.. ಪೈ

ಆಧುನಿಕ ಮಣಿಪಾಲದ ನಿರ್ಮಾತೃ ಡಾ. ಟಿ.ಎಂ.. ಪೈಗಳು ತಮ್ಮ ಮಿತ್ರರಾಗಿದ್ದ ಈವಾ ಲೊಂಬಾರ್ಡ್ರವರ ಸೇವೆಯನ್ನು ಬಹುವಾಗಿ ಮೆಚ್ಚಿ ಹೀಗಂದಿದ್ದಾರೆ. ಡಾ. ಈವಾ ಲೊಂಬಾರ್ಡ್ರವರಲ್ಲಿ ದಿವ್ಯಪ್ರಭೆಯಿದೆ. ಅಂತವರು ಯಾವ ದೇಶದಿಂದ ಬರುತ್ತಾರೆಂಬುದು ಮುಖ್ಯವಲ್ಲ. ಭರವಸೆ ಹಾಗೂ ಸಂತಸದ ಜ್ಯೋತಿಯನ್ನು ಹಿಡಿದುಕೊಂಡಿರುವ ದೇವತೆಯಂತೆ ಅವರು ವೈದ್ಯಕೀಯ ಶುಶ್ರೂಷೆಗೆ ನೀಡಿರುವ ಕೊಡುಗೆ ಕ್ಷೇತ್ರಕ್ಕೆ ದಾರಿದೀಪದಂತಿದೆ ಹಾಗೂ ಅವರಂತಹ ಮಹನೀಯರುಗಳ ಅಗತ್ಯ ಸಮಾಜಕ್ಕಿದೆ. ಅವರ ಸಾಧನೆಯನ್ನು ಹಾಗೂ ಮಹಿಳಾ ಸಬಲೀಕರಣಕ್ಕೆ ಅವರ ಕೊಡುಗೆಯನ್ನು ಗೌರವದಿಂದ ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ