ಸೋಮವಾರ, ಏಪ್ರಿಲ್ 25, 2016

ಕರಾವಳಿ ಹೀಗೇಕಾಯಿತು?

ಮರೆತು ಬಿಟ್ಟೆವೇ ನಮ್ಮ ಹಿರಿಯರು ಪಾಲಿಸಿದ ಧಾರ್ಮಿಕ ಸಾಮರಸ್ಯವನ್ನು?

ಕೆಲದಿನಗಳಿಂದ ವಾಟ್ಸ್ಯಾಪ್ನಲ್ಲಿ ಹರಿದಾಡುತ್ತಿದ್ದ ಮೆಸೇಜೊಂದರ ಆರಂಭಿಕ ಸಾಲು ಹೀಗಿತ್ತು-ಕರಾವಳಿಯಲ್ಲಿ ಕ್ರೈಸ್ತಧರ್ಮದವರು ಬೆಳೆಯುತ್ತಿದ್ದ ಮಲ್ಲಿಗೆ ಹೂವನ್ನು ಮುಸಲ್ಮಾನ ವ್ಯಾಪಾರಿಗಳು ಮಾರಾಟಮಾಡುತ್ತಿದ್ದರೆ ಹಿಂದೂಧರ್ಮೀಯರು ಅದನ್ನು ಕೊಂಡುಕೊಳ್ಳುತ್ತಿದ್ದರು ಎಂಬುದಾಗಿ. ಹೌದು, ಕರಾವಳಿ ಧಾರ್ಮಿಕ ಸಾಮರಸ್ಯಕ್ಕೆ ಹೆಸರಾದ ಪ್ರದೇಶ. ಅಸಹನೆ, ಅಸಹಿಷ್ಣುತೆಗಳು ಇಲ್ಲಿ ಇರಲೇ ಇಲ್ಲವೆಂದರೂ ತಪ್ಪಿಲ್ಲ. ಒಂದು ಪರಂಪರೆಯಾಗಿ ಬೆಳೆದುಬಂದ ಧಾರ್ಮಿಕ ಸಾಮರಸ್ಯತೆ ಇತ್ತೀಚೆಗಿನ ದಿನಗಳಲ್ಲಿ ಕದಡುತ್ತಾ ಬಂದಿರುವುದು ವಿಷಾದಕರ. ಒಂದು ಕ್ಷಣ ನಿಂತು ಯೋಚಿಸಿದರೆ, ನಮ್ಮ ಹಿರಿಯರು ಸಾಗಿ ಬಂದ ದಾರಿಯತ್ತ ಒಮ್ಮೆ ನೋಟ ಹರಿಸಿದರೆ ನಾವೆಲ್ಲಿ ದಾರಿ ತಪ್ಪಿದ್ದೇವೆಂದು ತಾನಾಗಿಯೇ ಅರಿವಿಗೆ ಬರುತ್ತದೆ.
ಅವಿಭಜಿತ ದಕ್ಷಿಣ ಕನ್ನಡದ ಧಾರ್ಮಿಕ ಸಂಸ್ಕೃತಿ ಇತರ ಪ್ರದೇಶಗಳಿಗಿಂತ ಭಿನ್ನವಾದುದು. ತುಳುನಾಡಿನ ಭೂತಾರಾಧನೆ, ನಾಗಾರಾಧನೆ, ತುಳು ಜಾನಪದ ಕಾವ್ಯವಾದ ಪಾಡ್ದನ ಇಲ್ಲಿನ ಸಾಂಸ್ಕೃತಿಕ ವೈಭವವನ್ನು ಸಾರುತ್ತವೆ. ಇವುಗಳಲ್ಲಿ ಪ್ರಮುಖ ಕೆಲವನ್ನು ಉಲ್ಲೇಖಿಸುವುದಾದರೆ ಬಬ್ಬರ್ಯ ಪಾಡ್ದನದಲ್ಲಿ ಬರುವ ಬಾಬು ಇಲ್ಲವೇ ಬಾವ ಬ್ಯಾರಿ ಒಬ್ಬ ಮುಸಲ್ಮಾನ. ಈತನ ತಾಯಿ ಫಾತಿಮಾ, ಈತನ ತಂದೆ ಮುರವ ಯಾನೇ ಉಮರ ಬ್ಯಾರಿ. ರೀತಿ ಬಾವ ಬ್ಯಾರಿಯನ್ನು ಒಬ್ಬ ದೈವಿಕ ಪುರುಷನನ್ನಾಗಿ ಆಚರಿಸಲಾಗುತ್ತದೆ. ಅತ್ತಾವರ ದೆಯ್ಯಗಳು, ಜುಮಾದಿ ದೈವ ಪಾಡ್ದನ, ಸಿರಿ ಪಾಡ್ದನಗಳಲ್ಲಿ ಮುಸ್ಲಿಮರು ಪಾತ್ರಗಳಾಗಿ ಮಿಂಚಿರುವುದು ತುಳುವರ ಧಾರ್ಮಿಕ ವಿಶಾಲತೆಗೆ ಸಾಕ್ಷಿ. ಮಂತ್ರವಾದಿ ಆಲಿಯಂತೂ ಆಲಿಭೂತವಾಗಿ ಆರಾಧ್ಯದೈವವಾಗಿದ್ದಾನೆ. ಉದ್ಯಾವರ ಮಾಡ ದೇವಳದ ಉತ್ಸವ, ಮುಸ್ಲಿಮ್ ವ್ಯಾಪಾರಿಯೊಬ್ಬನಿಂದ ವೀಳ್ಯ ಕೊಳ್ಳುವುದರಿಂದ ಆರಂಭವಾಗುತ್ತದೆ. ಉಡುಪಿ ಮಠಗಳ ಪರ್ಯಾಯ ಉತ್ಸವದಲ್ಲಿ ಮುಸ್ಲಿಮ್ ಕುಟುಂಬವೊಂದು ಪ್ರಭಾವಳಿ ರಚಿಸುವುದು, ರಥ ಅಲಂಕರಿಸುವುದು, ದುರುಸು ಬಾಣಗಳನ್ನು ಬಿಡುವುದು ಶತಮಾನಗಳಿಂದ ನಡೆದು ಬಂದ ಸಂಪ್ರದಾಯ. ಮೂಲ್ಕಿಯ ಪ್ರಸಿದ್ಧ ದುರ್ಗಾಪರಮೇಶ್ವರಿ ದೇವಸ್ಥಾನದ ಹಿನ್ನೆಲೆಯಲ್ಲಿ ಬಪ್ಪ ಬ್ಯಾರಿಯೆಂಬ ಮುಸಲ್ಮಾನನಿರುವುದು ಇನ್ನೊಂದು ವಿಶೇಷ.
ನಾಡಿನ ಸಾಮರಸ್ಯವನ್ನು ಕಣ್ಣಾರೆ ಕಂಡು ದಾಖಲಿಸಿದ ವಿದೇಶಿ ಪ್ರವಾಸಿಗರೂ ಬಹಳಷ್ಟಿದ್ದಾರೆ. 1342ರಲ್ಲಿ ಭೇಟಿನೀಡಿದ್ದ ಮಹಮ್ಮದ್ ಇಬ್ನ ಬತೂತ ಮಂಗಳೂರಿನ ಹಿಂದೂ ಅರಸ ವಾಸುದೇವನನ್ನು ಒಬ್ಬ ಸಮರ್ಥ ಆಡಳಿತಗಾರನೆಂದೂ, ಇಲ್ಲಿ ಮುಸ್ಲಿಮರು ಹಿಂದೂಗಳೊಂದಿಗೆ ಅಣ್ಣತಮ್ಮಂದಿರಂತೆ ಬಾಳುತ್ತಾರೆ, ಸುಮಾರು 4000 ಮುಸಲ್ಮಾನ ವ್ಯಾಪಾರಿಗಳು ಜಿಲ್ಲೆಯಲ್ಲಿದ್ದಾರೆಂದು ಬರೆದಿದ್ದಾನೆ. ಇಟೆಲಿಯ ಪೀಟರ್ ಡಲ್ಲವಿಲ್ಲೆ 1523ರಲ್ಲಿ ಭೇಟಿ ನೀಡಿದ್ದಾಗ ಕೆಳದಿ ರಾಜರ ಸೇನಾಧಿಕಾರಿಯಾಗಿ ಮೂಸ ಬ್ಯಾರಿ ಎನ್ನುವಾತ ಸೇವೆಯಲ್ಲಿದ್ದಾನೆ ಎಂದು ಬರೆದಿರುವುದರ ಜೊತೆಗೆ ಉಳ್ಳಾಲದ ರಾಣಿ ಅಬ್ಬಕ್ಕಳ ಸೈನ್ಯದಲ್ಲಿ, ಚೌಟ, ಬಂಗ ಅರಸರ ಸೈನ್ಯದಲ್ಲಿ ಮುಸಲ್ಮಾನರು ತುಂಬಾ ಸಂಖ್ಯೆಯಲ್ಲಿದ್ದಾರೆ, ಕ್ರೈಸ್ತ ಪ್ರವಾಸಿಗರನ್ನು ಇಲ್ಲಿ ಬಹಳ ಆದರದಿಂದ ಬರಮಾಡಿಕೊಳ್ಳುತ್ತಾರೆ ಎಂದೂ ಬರೆದಿದ್ದಾನೆ.
ಉಡುಪಿ ಪ್ರಾಂತ್ಯದಲ್ಲೂ ಕೋಮು ಸೌಹಾರ್ದತೆಯ ಬಗ್ಗೆ ಹಲವಾರು ನಿದರ್ಶನಗಳು ಕಾಣಸಿಗುತ್ತದೆ. ಕಾರ್ಪೊರೇಶನ್ ಬ್ಯಾಂಕಿನ ಸ್ಥಾಪಕರಾದ ಹಾಜೀ ಅಬ್ದುಲ್ಲಾ ಸಾಹೇಬರು ಅಷ್ಟಮಠಗಳ ಮತ್ತು ಉಡುಪಿ ಜನತೆಯ ಕಷ್ಟ-ಸುಖಗಳಲ್ಲಿ ಸ್ವತಃ ಭಾಗಿಯಾಗುತ್ತಿದ್ದ ಪರೋಪಕಾರಿಯಾಗಿದ್ದರು. 1940 ದಶಕದ ರೇಶನ್ ಕಾಲದಲ್ಲಿ ಅಕ್ಕಿ ಸಿಗಲು ಕಷ್ಟವಾದಾಗ ಸಾಹೇಬರು ರಂಗೂನಿನಿಂದ ಪರ್ಯಾಯಕ್ಕೆ ಬೇಕಾಗುವ ಅಕ್ಕಿ ತರಿಸಿಕೊಟ್ಟ ಸಾಹಸಿಗರು. ಉಡುಪಿಯ ಪ್ರಸಿದ್ಧ ಲಕ್ಷದೀಪೋತ್ಸವಕ್ಕೆ ಹತ್ತಾರು ಡಬ್ಬ ಎಣ್ಣೆಯನ್ನು ತಪ್ಪದೆ ದಾನಕೊಡುತ್ತಿದ್ದರು. ಒಮ್ಮೆ ಎಣ್ಣೆ ಸಿಗದಿದ್ದ ಸಂದರ್ಭದಲ್ಲಿ ಕೃಷ್ಣನ ಉತ್ಸವ ನಿಲ್ಲಬಾರದೆಂದು ಹತ್ತಾರು ಡಬ್ಬ ತುಪ್ಪದ ದೀಪದಲ್ಲಿ ಲಕ್ಷದೀಪೋತ್ಸವವನ್ನು ನಡೆಸಿಕೊಟ್ಟದ್ದು ನಿಜಕ್ಕೂ ಅಚ್ಚರಿ ಮೂಡಿಸುವ ಸಂಗತಿ. ಕಾರ್ಕಳದಲ್ಲಿ ಕ್ರೈಸ್ತರ ಆರಾಧನ ಕೇಂದ್ರವಾದ ಅತ್ತೂರು ಚರ್ಚ್ ವಾರ್ಷಿಕ ಉತ್ಸವದಲ್ಲಿ ಹಿಂದೂ, ಮುಸಲ್ಮಾನ, ಕ್ರೈಸ್ತ ಬಾಂಧವರು ಜೊತೆಯಾಗಿ ಹಬ್ಬ ಆಚರಿಸುವುದು ಇಂದಿಗೂ ನಡೆದುಬಂದಿದೆ. ಕಿನ್ನಿಗೋಳಿಯ ದಾಮಸ್ ಕಟ್ಟೆಯ ಕಿರೆಂ ಚರ್ಚ್ನಲ್ಲಿ ಹಿಂದೆ ಟಿಪ್ಪುವಿನ ಧಾಳಿಯಾದಾಗ ಚರ್ಚ್ ಉಳಿಸಲು ಸಹಾಯಮಾಡಿದ ಮೂರು ಗುತ್ತಿನ ಮನೆತನಗಳಿಗೆ ಇಂದಿಗೂ ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಅಡಿಕೆ, ಬಾಳೆ ಗೊನೆ, ಹಾಗೂ ವೀಳ್ಯ ನೀಡಿ ಗೌರವಿಸಲಾಗುತ್ತದೆ. ಮೂಲಕ ಭಾವೈಕ್ಯತೆಯನ್ನು ಮೆರೆಯಲಾಗುತ್ತಿದೆ.
ಇಂಗ್ಲಿಷರ ಕಾಲದಲ್ಲಿ ಅವರ ವಿರುದ್ಧ ನಡೆದ 'ಕಲ್ಯಾಣಪ್ಪನ ಕಾಟುಕಾಯಿ' ಎಂಬ ದಂಗೆಯಲ್ಲಿ ಬಂಟ್ವಾಳದ ಮೋನು ಬ್ಯಾರಿ, ಅದ್ದುನ್ನಿ ಬ್ಯಾರಿ ಎನ್ನುವವರು ತಮ್ಮ ಹಿಂದೂ ಸಹೋದರರಿಗೆ ಹೆಗಲಿಗೆ ಹೆಗಲುಕೊಟ್ಟು ಹೋರಾಡಿ ದಂಗೆಯ ಪ್ರಮುಖ ಪಾತ್ರ ವಹಿಸಿದ್ದಲ್ಲದೆ ಶಿಕ್ಷೆಯನ್ನೂ ಅನುಭವಿಸಿದ್ದರು. ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಮೊದಲ ಗುಪ್ತ ಸಭೆಯು ಮಂಗಳೂರು ಬಂದರಿನಲ್ಲಿರುವ ಕಚ್ಚಿ ಮೇಮನ್ ಮಸೀದಿಯ ಖಬರ್ಸ್ಥಾನದಲ್ಲಿ ಸ್ವಾತಂತ್ರ್ಯವೀರ ದಿ. ಕಾರ್ನಾಡ್ ಸದಾಶಿವರಾಯರ ಮುಂದಾಳುತನದಲ್ಲಿ ಜರಗಿತ್ತಂತೆ. ಗಾಂಧೀಜಿಯವರು 1920 ಆಗಸ್ಟ್ 19 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ ಮುಸಲ್ಮಾನ ಸಭಿಕರ ಸಂಜೆ ನಮಾಜಿನ ಅನುಕೂಲತೆಗಾಗಿ ನಡುವೆ ತಮ್ಮ ಭಾಷಣ ನಿಲ್ಲಿಸಿ, ಪ್ರಾರ್ಥನೆಯ ನಂತರ ಭಾಷಣವನ್ನು ಮುಂದುವರೆಸಿದ್ದರು. ಕುಂದಾಪುರದ ಕರಾವಳಿಯಲ್ಲಿ ಮೀನುಕ್ಷಾಮ ತಲೆದೋರಿದರೆ ಮೀನುಗಾರರು 'ಸೀರನಿ ಪೂಜೆ' ಎನ್ನುವ ಆರಾಧನೆಯನ್ನು ನಡೆಸುತ್ತಾರೆ. ಪುಟ್ಟ ಮರದ ದೋಣಿಯಲ್ಲಿ ಪಂಚಕಜ್ಜಾಯವನ್ನು ತುಂಬಿ, ಮುಸ್ಲಿಂ ಮೌಲ್ವಿಯೊಬ್ಬರಿಂದ ಪ್ರಾರ್ಥನೆ ಮಾಡಿ ದೋಣಿಯನ್ನು ಸಮುದ್ರಕ್ಕೆ ತೇಲಿಬಿಡುವುದೇ ಸೀರನಿ ಪೂಜೆ.
ಇವೆಲ್ಲಾ ಹಿಂದೂ, ಮುಸಲ್ಮಾನ, ಕ್ರೈಸ್ತರ ಧಾರ್ಮಿಕ ಸಾಮರಸ್ಯ ಭಾವನೆಗಳಿಗೆ ಕೆಲವೊಂದು ಉದಾಹರಣೆಗಳಷ್ಟೇ. ನಮ್ಮ ಹಿರಿಯರು ಇಂತಹ ಸಾವಿರಾರು ಆದರ್ಶಗಳನ್ನು ನಾಡಿನಲ್ಲಿ ಬಿಟ್ಟುಹೋಗಿದ್ದಾರೆ. ಆರೆ ನಿಟ್ಟಿನಲ್ಲಿ ನಾವು ನಮ್ಮ ಮುಂದಿನ ಜನಾಂಗಕ್ಕೇನು ನೀಡುತ್ತಿದ್ದೇವೆ ಎಂಬುದನ್ನು ನೆನೆಸುವಾಗ ಆತಂಕವಾಗುತ್ತದೆ. ಮಹಾತ್ಮಾ ಗಾಂಧೀಜಿಯವರ 11 ಪ್ರತಿಜ್ಞೆಗಳನ್ನು ಆಧರಿಸಿದ ತತ್ವದಂತೆ ಸರ್ವಧರ್ಮ ಸಮಭಾವ ಪರಿಕಲ್ಪನೆ ನಮ್ಮದಾಗಬೇಕು. 'ಎಲ್ಲಾ ಧರ್ಮಗಳೂ ಶ್ರೇಷ್ಠವೇ. ಪ್ರತಿಯೊಂದು ಧರ್ಮದಲ್ಲೂ ವೈಶಿಷ್ಟ್ಯಗಳಿವೆ. ಯಾವ iವೂ ಇನ್ನೊಂದು ಧರ್ಮಕ್ಕಿಂತ ಮೇಲೂ ಅಲ್ಲ, ಕೀಳೂ ಅಲ್ಲ. ಪ್ರತಿಯೊಂದು ಧರ್ಮವೂ ಇನ್ನೊಂದು ಧರ್ಮಕ್ಕೆ ಪೂರಕ' ಎಂಬ ಅವರ ಮಾತನ್ನು ನಾವೆಲ್ಲರೂ ಸರಿಯಾಗಿ ಅರ್ಥೈಸಿಕೊಳ್ಳಬೇಕಾಗಿದೆ. ಧರ್ಮಗಳು ಜನರನ್ನು ವಿಭಜನೆ ಮಾಡುತ್ತವೆ ಎನ್ನುವ ಮಾತು ಕರಾವಳಿಯ ಮಟ್ಟಿಗೆ ಸತ್ಯವಲ್ಲ ಎಂಬುದನ್ನು ನಾವೀಗ ಮತ್ತೆ ಜಗತ್ತಿಗೆ ತೋರಿಸಬೇಕಾಗಿದೆ.

(ಪೂರಕ ಮಾಹಿತಿ: 'ಪೊಲಿ' ಗ್ರಂಥದಲ್ಲಿರುವ ವಹಾಬ್ ದೊಡ್ಡಮನೆಯವರ 'ಧಾರ್ಮಿಕ ಸಾಮರಸ್ಯ' ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ