ಭಾನುವಾರ, ನವೆಂಬರ್ 18, 2012

ಸ್ತ್ರೀ ಪಾತ್ರಕ್ಕೆ ಜೀವ ತುಂಬುವ ಮರ್ವಿನ್

ಈತನ ಒನಪು-ವಯ್ಯಾರಗಳನ್ನು ನೋಡಿದರೆ ಎಂತಹಾ ರೂಪಸಿಯರೂ ಹಲ್ಲು ಕಚ್ಚಬೇಕು. ಸ್ನಿಗ್ಧ ಸೌಂದರ್ಯದ ತಿದ್ದಿ ತೀಡಿದ ಮುಖ, ಮುಖಕ್ಕೊಪ್ಪುವ ಮೆಕಪ್, ನೀಳ ಕೇಶರಾಶಿ ನೋಡಿದರೆ ಇವರನ್ನು ಪುರುಷ ಎನ್ನಲು ಸಾಧ್ಯವೇ ಇಲ್ಲ. ಆದರೆ ಈತ ಪುರುಷ. ಸ್ತ್ರೀ ಪಾತ್ರಧಾರಿ ಪುರುಷ, ಮರ್ವಿನ್ ಅರಾನ್ನ ಶಿರ್ವ.
   ಮಹಿಳಾ ಪಾತ್ರಗಳಿಗೆ ತುಳು ರಂಗಭೂಮಿಯಲ್ಲಿ ಹೊಸ ಭಾಷ್ಯ ಬರೆದ ಮರ್ವಿನ್ ಹುಟ್ಟಿದ್ದು, ಬೆಳೆದದ್ದು ಎಲ್ಲಾ ಉಡುಪಿ ಜಿಲ್ಲೆಯ ಶಿರ್ವದಲ್ಲಿ.ಆಗಸ್ಟ್ , ೧೯೮೨ರಲ್ಲಿ ಇಗ್ನೇಷಿಯಸ್ ಅರಾನ್ನ, ಜೂಲಿಯಾನಾ ಅರಾನ್ನ ದಂಪತಿಗಳ ಸುಪುತ್ರನಾಗಿ ಜನಿಸಿದರು. ಪ್ರಾಥಮಿಕ, ಪ್ರೌಢ, ಹಾಗೂ ಪದವಿಪೂರ್ವ ಶಿಕ್ಷಣವನ್ನು ಶಿರ್ವದ ಸಂತ ಮೇರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಗಿಸಿದ ಮರ್ವಿನ್ಗೆ ಬಾಲ್ಯದಿಂದಲೂ ರಂಗಭೂಮಿಯೆಂದರೆ ಅದೇನೋ ಆಸಕ್ತಿ. ಮರ್ವಿನ್ ಮೊದಲು ಸ್ಟೇಜ್ ಹತ್ತಿದ್ದು ೬ನೇ ತರಗತಿಯಲ್ಲಿ. 'ಮಿಲಿಟರಿ ವೆಡ್ಡಿಂಗ್' ಎಂಬ ರೂಪಕಕ್ಕೆ ಮದುಮಗಳ ಪಾತ್ರವಹಿಸಲು ಸೂಕ್ತ ಹುಡುಗಿಯನ್ನು ಹುಡುಕುತ್ತಿದ್ದ ಶಿಕ್ಷಕರ ಕಣ್ಣಿಗೆ ಬಿದ್ದದ್ದು ಮರ್ವಿನ್. ನೋಡಲು ಸುಂದರವಾಗಿ, ತೆಳ್ಳಗೆ-ಬೆಳ್ಳಗೆ ಇದ್ದ ಮರ್ವಿನ್ ಮದುಮಗಳಾಗಿ ಆಯ್ಕೆಯಾಗಿಯೇ ಬಿಟ್ಟರು! ಉತ್ತಮವಾಗಿ ಅಭಿನಯಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.
   ಹೀಗೆ ತನ್ನ ಮೊದಲ ಪಾತ್ರದಲ್ಲೇ ಹೆಣ್ಣಾಗಿ ಅಭಿನಯಿಸಿದ ಮರ್ವಿನ್ ಹೈಸ್ಕೂಲ್ಗೆ ಬಂದಾಗ ಪುರುಷ ಪಾತ್ರಗಳಲ್ಲೇ ಅಭಿನಯಿಸುತ್ತಿದ್ದರು. ಛದ್ಮವೇಷ, ನೃತ್ಯ, ಭಾಷಣ, ಕ್ರೀಡೆ ಹೀಗೆ ಎಲ್ಲಾ ವಿಭಾಗದಲ್ಲಿ ಸೈ ಎನಿಸಿಕೊಂಡರು. ಶಾಲೆಯ ಸಣ್ಣ-ಪುಟ್ಟ ನಾಟಕಗಳನ್ನು ಹೊರತುಪಡಿಸಿ ಮರ್ವಿನ್ ರಂಗಭೂಮಿಗೆ ಎಂಟ್ರಿ ಕೊಟ್ಟಿದ್ದು ಕೊಂಕಣಿ ನಾಟಕದಲ್ಲಿ. ೧೯೯೮ ರಲ್ಲಿ ತನ್ನ ೧೬ನೆಯ ವಯಸ್ಸಿನಲ್ಲಿಯೇ ತಾಯಿಯ ಪಾತ್ರಮಾಡಿ ಗಮನಸೆಳೆದರು. ನಂತರ ಆಸುಪಾಸಿನ ಯುವಕ ಮಂಡಲ, ಗೆಳೆಯರ ಬಳಗದ ವಾರ್ಷಿಕೋತ್ಸವದ ತುಳು ನಾಟಕಗಳಲ್ಲಿ ಮರ್ವಿನ್ಗೆ ಸ್ತ್ರೀ ಪಾತ್ರಗಳು ಹರಿದು ಬರತೊಡಗಿದವು. ತನ್ನ ಮಾತೃಭಾಷೆ ಕೊಂಕಣಿಯದರೂ ತುಳುವಿನಲ್ಲಿ ಲೀಲಾಜಾಲವಾಗಿ ಮಾತನಾಡಬಲ್ಲ ಮರ್ವಿನ್ಗೆ ತುಳು ನಾಟಕ ಕಷ್ಟವಾಗಲಿಲ್ಲ. ಮರ್ವಿನ್ ಅಭಿನಯಿಸಿದ ಮೊದಲ ತುಳು ನಾಟಕ 'ಗಂಗಾರಾಮ'; ಮೊದಲ ಬಾರಿಗೆ ನಾಯಕಿಯ ಪಾತ್ರದಲ್ಲಿ ಮಿಂಚಿದ 'ಕಡಿರ ಮಗೆ' ನಾಟಕ ಮರ್ವಿನ್ ಪ್ರತಿಭೆಯನ್ನು ಬೆಳಕಿಗೆ ತಂದಿತು.
ಸಕ್ರಿಯ ರಂಗಕಲಾವಿದನಾಗಿ ಮರ್ವಿನ್:
   ತನ್ನ ವಿದ್ಯಾಭ್ಯಾಸವನ್ನು ನಾಟಕದ ಜೊತೆ ಜೊತೆಗೆ ಮುಂದುವರಿಸಿದ ಮರ್ವಿನ್ ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ ಪಡೆದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇರಿಕೊಂಡರು. ಮೊದಲು ಹವ್ಯಾಸಕ್ಕಾಗಿ ಪಾತ್ರಮಾಡುತ್ತಿದ್ದ ಮರ್ವಿನ್ ೨೦೦೧ರ ನಂತರ ವೃತ್ತಿರಂಗಭೂಮಿಗೆ ಪದಾರ್ಪಣೆ ಮಾಡಿದರು. ಜನಪ್ರಿಯ ನಾಟಕ ಕಂಪೆನಿಗಳಾದ ಕಲಾರಂಗ ಕಾರ್ಕಳ, ಮಾರುತಿ ಕಲಾವಿದರು ಕಾರ್ಕಳ, ನಮನ ಕಲಾವಿದರು ನಿಟ್ಟೆ, ವಿಜಯಾ ಕಲಾವಿದರು ಕಿನ್ನಿಗೋಳಿ, ನಮ್ಮ ಬೆದ್ರ, ಮೂರು ಮುತ್ತು ಕುಂದಾಪುರ, ಹಾಗೂ ಪಡುಬಿದ್ರಿಯ ನಾಟಕ ತಂಡದಲ್ಲಿ ಮಿಂಚಿದ ಮರ್ವಿನ್ ೨೦೦೬ರಿಂದ ಕಾಪುವಿನ 'ರಂಗ ತರಂಗ'ದಲ್ಲಿ ಸ್ತ್ರೀ ಪಾತ್ರಧಾರಿಯಾಗಿ ತನ್ನ ಪ್ರತಿಭೆಯನ್ನು ಓರೆಗೆ ಹಚ್ಚುತ್ತಿದ್ದಾರೆ.
    ಈವರೆಗೆ ಮರ್ವಿನ್ ಸುಮಾರು ೨೦೦ಕ್ಕಿಂತಲೂ ಅಧಿಕ ನಾಟಕಗಳಲ್ಲಿ ನಟಿಸಿದ್ದಾರೆ ಹಾಗೂ ಸುಮಾರು ೨೩೦೦ಕ್ಕಿಂತಲೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದ್ದಾರೆ. ಅವುಗಳೆಲ್ಲವೂ ಸ್ತ್ರೀ ಪಾತ್ರಗಳು ಎಂಬುದು ಮೆಚ್ಚಬೇಕಾದ ಅಂಶ. ಮರ್ವಿನ್ ಮನೋಜ್ಞ ಅಭಿನಯಕ್ಕೆ ಹತ್ತು-ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ' ನಲ್ಕೆ ದಾಯೆಗ್' ಎಂಬ ನಾಟಕಕ್ಕೆ ಉತ್ತಮ ಪೋಷಕ ನಟಿ ಪ್ರಶಸ್ತಿ ಎರಡು ಕಡೆಗಳಲ್ಲಿ ಬಂದಿದೆ. 'ಕಾಂತುನ ಕನ' ನಾಟಕಕ್ಕೆ ಅತ್ಯುತ್ತಮ ಹಾಸ್ಯ ಸ್ತ್ರೀ ಪಾತ್ರಧಾರಿ ಪ್ರಶಸ್ತಿ ಹಾಗೂ 'ತೆಲಿಕೆದ ನಲಿಕೆ' ಎಂಬ ನಾಟಕಕ್ಕೆ 'ಉತ್ತಮ ಖಳನಾಯಕಿ' ಪ್ರಶಸ್ತಿಯೂ ಒಲಿದಿದೆ. ದಿ.ಸತೀಶ್ ಶೆಣೈ ಶಿರ್ವರನ್ನು ತನ್ನ ನಾಟಕ ಗುರುಗಳೆಂದು ಗೌರವಿಸುವ ಮರ್ವಿನ್ಗೆ ಅವರೇ ಆದರ್ಶ. ಇದಲ್ಲದೆ ತನ್ನ ಊರವರ, ಸಹ ಕಲಾವಿದರ, ಸಹೋದ್ಯೋಗಿ ಮಿತ್ರರ ಪ್ರೋತ್ಸಾಹ, ಮನೆಯವರ ಬೆಂಬಲವನ್ನು ಸ್ಮರಿಸಲು ಮರೆಯುವುದಿಲ್ಲ.
   ತನ್ನ ೧೧ ವರ್ಷದ ವೃತ್ತಿ ರಂಗಭೂಮಿಯ ಪಯಣದಲ್ಲಿ ಬೇರೆ ಬೇರೆ ನಾಟಕ ತಂಡಗಳಲ್ಲಿ ನಟಿಸಿದರೂ ಮರ್ವಿನ್ಗೆ ಕಾಪುವಿನ 'ರಂಗ ತರಂಗ' ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ರಂಗ ತರಂಗದ ಜನಪ್ರಿಯ ನಾಟಕಗಳಾದ ತಿಲಕೆ ತಿರ್ಗಯೆ, ಪಿರ ಬನ್ನಗ, ಆಪಿನಿ ಬೇತೆನೆ, ಖಂಡಿತಾ ಬುಡ್ದು ಪೋಪುಜಿ, ಏಪಲಾ ೩೬ ಅತ್ತ ೬೩, ಆಯೆ ಸುಬಗೆ, ಇಲ್ಲ್ ಬದ್ಕ್, ನಿರೆಲ್ ಗಳಲ್ಲಿ ಇವರು ಶ್ರೇಷ್ಠ ಅಭಿನಯ ನೀಡಿದ್ದಾರೆ. ರಂಗ ತರಂಗದ ಪಾತ್ರಧಾರಿಗಳ ಐಕ್ಯತೆಯನ್ನು ಕೊಂಡಾಡುವ ಮರ್ವಿನ್ ಅಲ್ಲಿನ ಪಾತ್ರಧಾರಿಗಳ ತಾಂತ್ರಿಕ ಕೌಶಲ್ಯ, ವಿಭಿನ್ನ ಆಲೋಚನಾ ಪ್ರವೃತ್ತಿಯನ್ನು ಬಹಳವಾಗಿ ಮೆಚ್ಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ದುಬೈನಲ್ಲಿ ಪ್ರದರ್ಶನ ನೀಡಿ ಬಂದ ರಂಗ ತರಂಗವು ಸದ್ಯದಲ್ಲೇ ಕುವೈಟ್, ಮಸ್ಕತ್ಗಳಿಗೂ ಪ್ರಯಾಣ ಬೆಳೆಸಲಿದೆ.
   ಕೆಲವೊಂದು ತುಳು ನಾಟಕಗಳಲ್ಲಿ (ಪ್ರಬುದ್ಧ ರಂಗ ತಂಡಗಳನ್ನು ಹೊರತು ಪಡಿಸಿ) ಕೊನೆ ಕ್ಷಣಕ್ಕೆ ಪಾತ್ರಧಾರಿಗಳು ಕೈಕೊಟ್ಟು ಫಜೀತಿಗೆ ಸಿಲುಕಿಸುವುದುಂಟು. ಅಂತಹಾ ಸಂದರ್ಭಗಳಲ್ಲಿ ಸಂಘಟಕರಿಗೆ ಆಪತ್ಭಾಂದವನಾಗಿ ಗೋಚರಿಸುವುದು ಮರ್ವಿನ್. ಕೇವಲ ಒಂದು ಬಾರಿ ನಾಟಕದ 'ಪ್ಲಾಟ್' ಓದಿ ನೇರವಾಗಿ ಅಭಿನಯಿಸುವ ಕಲಾ ಚತುರ, ಈವರೆಗೆ ಸುಮಾರು ೧೨ ಬಾರಿ ಬೇರೆ ಬೇರೆ ಸ್ಥಳಗಳಲ್ಲಿ 'ಆನ್ ದಿ ಸ್ಪಾಟ್' ಅಭಿನಯದ ಮೂಲಕ ಸಂಘಟಕರ ಮಾನ ಕಾಪಾಡಿದ್ದಾರೆ. ತನ್ನ ಸ್ತ್ರೀ ಪಾತ್ರದ ಅಭಿನಯ ಚಾತುರ್ಯದ ಜೊತೆಗೆ ಓರ್ವ ನೃತ್ಯಪಟುವಾಗಿಯೂ ಮರ್ವಿನ್ ಖ್ಯಾತರು. ಯಾವುದೇ ತರಬೇತಿಯಿಲ್ಲದೆ ನೃತ್ಯದ ಹಲವು ಪ್ರಕಾರಗಳನ್ನು ಸುಲಲಿತವಾಗಿ ಮಾಡಬಲ್ಲರು. 'ನಾ ನಿನ್ನ ಗೆಲ್ಲಲಾರೆ' ಚಲನಚಿತ್ರದ 'ಜೀವ ಹೂವಾಗಿದೆ' ಹಾಡಿಗೆ ಸೀರೆಗಳನ್ನು ಬದಲಾಯಿಸುವ ಮರ್ವಿನ್ ಒಂದು ದಾಖಲೆಯನ್ನೇ ನಿರ್ಮಿಸಿದ್ದಾರೆ. ೧೫ ಸೆಕೆಂಡ್ಗಳಲ್ಲಿ ಒಂದು ಸೀರೆ ಬದಲಾಯಿಸುವ ಮರ್ವಿನ್ ಚಾಕಚಕ್ಯತೆ ಬಹುಶಃ ಸ್ತ್ರೀಯರಿಗೂ ಬರಲಿಕ್ಕಿಲ್ಲ. ಇದೊಂದೇ ನೃತ್ಯವನ್ನು ಸುಮಾರು ೧೨೮ ಕಡೆಗಳಲ್ಲಿ ಪ್ರದರ್ಶಿಸಿ, ಎಲ್ಲಡೆಯಲ್ಲೂ ಭರ್ಜರಿ ಕರತಾಡನ ಗಿಟ್ಟಿಸಿದ ನೃತ್ಯಪಟು ಮರ್ವಿನ್. ಆಕಾಶವಾಣಿಯಲ್ಲೂ ಒಂದು ನಾಟಕ ನೀಡಿರುವ  ಮರ್ವಿನ್ ಕಳೆದ ಕೆಲ ಸಮಯದಿಂದ ಸ್ಪಂದನ ವಾಹಿನಿಯ 'ನಮಸ್ಕಾರ ಮೇಡಂ' ಎಂಬ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದು ಕಾರ್ಯಕ್ರಮವೂ ಜನಮೆಚ್ಚುಗೆ ಗಳಿಸಿದೆ. 'ಬಲೆ ತೆಲಿಪಾಲೆ'ಯ ಮೂಲಕ ಜಗದಗಲ ಇವರ ಖ್ಯಾತಿ ಈಗ ಹರಡಿದೆ.

   ಸ್ತ್ರೀ ಪಾತ್ರವನ್ನು ಮಾಡುವುದು ಮೇಲ್ನೋಟಕ್ಕೆ ಸುಲಭವಾಗಿ ಕಂಡರೂ ಅದು ಬಹಳ ಕಷ್ಟದ ಕೆಲಸ ಎಂಬುದು ಮರ್ವಿನ್ ಅನುಭವದ ಮಾತು. ಅಲ್ಲಿ ಪಾತ್ರಧಾರಿ ತನ್ನ ವರ್ತನೆಯಲ್ಲಿ ಬದಲಾವಣೆ ತರಬೇಕಾಗುತ್ತದೆ. ಮೇಕಪ್, ಹಾವಭಾವ, ಧ್ವನಿ ಬದಲಾವಣೆ ಸೇರಿದಂತೆ, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವುದು ಕೂಡಾ ಸ್ತ್ರೀ ಪಾತ್ರಕ್ಕೆ ಅತ್ಯಗತ್ಯ. ಸ್ತ್ರೀ ಪಾತ್ರಕ್ಕೆ ಇತರ ಪಾತ್ರಗಳಿಗಿಂತ ಹೆಚ್ಚಿನ ತರಬೇತಿ ಬೇಕು, ಪಾತ್ರದ ಮೇಲೆ ವಿಶೇಷ ಬದ್ಧತೆ ತೋರಿಸಬೇಕು ಎನ್ನುವ ಮರ್ವಿನ್ ಅದರಲ್ಲಿ ತಾನು ಸಂಪೂರ್ಣ ತೊಡಗಿಸಿಕೊಂಡು ಯಶ ಕಂಡಿದ್ದಾರೆ. ಹೊಸ ಪ್ರತಿಭೆಗಳನ್ನು, ಹೊಸ ಕಲಾಕಾಣಿಕೆಗಳನ್ನು ಮನತುಂಬಿ ಪ್ರೋತ್ಸಾಹಿಸುವ ಮರ್ವಿನ್ ತನ್ನ ವೃತ್ತಿರಂಗಭೂಮಿಯಲ್ಲಿ ಇನ್ನಷ್ಟು ಎತ್ತರಕ್ಕೇರಲಿ ಎಂಬುದೇ ತುಳು ನಾಟಕಾಭಿಮಾನಿಗಳ ಆಶಯ.

ಮಂಗಳವಾರ, ಜುಲೈ 3, 2012

ನೀರು, ಕಡಲ್ಕೊರೆತ – ಶಾಶ್ವತ ಪರಿಹಾರ ಬೇಕು

ಮಳೆಗಾಲ ಆರಂಭವಾಗಿದೆ. ನಿನ್ನೆ ಮೊನ್ನೆಯವರೆಗಿದ್ದ ‘ನೀರಿನ ಬರ’ ದ ಸಮಸ್ಯೆ ಉಡುಪಿ, ದ.ಕ. ಜಿಲ್ಲೆಗಳಲ್ಲಿ ಬಹುತೇಕ ಮಾಯವಾಗಿದೆ. ಕಳೆದ ಹಲವಾರು ವರ್ಷಗಳಿಂದ ಕರಾವಳಿಯ ಜನತೆ ಈ ರೀತಿಯ ಬರ ಎದುರಿಸಿರಲಿಲ್ಲ. ಆದುದರಿಂದ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಕಂಗೆಡುವ ಪರಿಸ್ಥಿತಿ ಎದುರಾಗಿತ್ತು. ಆದರೆ ಕೊಂಚ ತಡವಾದರೂ ಜೋರಾಗಿ  ಆಗಮಿಸಿದ ಮುಂಗಾರು ಸದ್ಯಕ್ಕೆ ಈ ಸಮಸ್ಯೆಗೆ ಬ್ರೇಕ್ ಹಾಕಿದೆ.
     ಪ್ರತೀವರ್ಷ ಉತ್ತರ ಕರ್ನಾಟಕದ ಜನತೆ ಬರದ ಸಮಸ್ಯೆ ಎದುರಿಸುತ್ತಾರೆ. ಅಲ್ಲಿ ಬೀಳುವ ಮಳೆಯ ಪ್ರಮಾಣವೂ ಕಮ್ಮಿ ಹಾಗಾಗಿ ಅದು ನಿರೀಕ್ಷಿತ. ಆದರೆ ಕರಾವಳಿಯಲ್ಲಿ ಮಳೆಯಿಂದ ಅಂತಹಾ ಮೋಸವೇನೂ ಆಗಿಲ್ಲ.ಕಳೆದ ವರ್ಷ ಉತ್ತಮ ಮಳೆಯಾಗಿತ್ತು. ಆದರೂ ಈ ವರ್ಷ ಬರದ ಸಮಸ್ಯೆ ಜನರನ್ನು ಕಾಡಿದೆ. ಮಳೆ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ತರಬಹುದು ಆದರೆ ಶಾಶ್ವತ ಪರಿಹಾರದತ್ತ ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ.
     ಕರಾವಳಿ ಜಿಲ್ಲೆಗಳಲ್ಲಿ ಬರ ಉಂಟಾಗಲು ಪ್ರಮುಖವಾಗಿ ಎರಡು ಕಾರಣಗಳಿವೆ. ಒಂದು ಅಂತರ್ಜಲ ಸಮಸ್ಯೆ ಮತ್ತೊಂದು ಹೂಳು ತುಂಬಿದ ಕೆರೆ ಹಾಗೂ ನದಿಗಳು.ಅಂತರ್ಜಲ ಸಮಸ್ಯೆ ನಮ್ಮ ಬಾವಿಗಳನ್ನು ಬೇಗನೆ ಇಂಗುವಂತೆ ಮಾಡುತ್ತವೆ. ಅವೈಜ್ಞಾನಿಕ ರೀತಿಯಲ್ಲಿ ಬೋರವೆಲ್ ಗಳನ್ನು ತೋಡುವುದು ಕೂಡಾ ಈ ಸಮಸ್ಯೆಗೆ ಕಾರಣ. ಹಾಗಾಗಿ ಅಂತರ್ಜಲ ಸಂರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಜಲ ಮರುಪೂರಣ ವ್ಯವಸ್ಥೆ ಮಾಡಬೇಕು. ಮಳೆನೀರು ಕೊಯ್ಲು , ಇಂಗುಗುಂಡಿಗಳ ನಿರ್ಮಾಣ ಮುಂತಾದ ಕಾರ್ಯಗಳು ಇನ್ನಷ್ಟು ಬಲಗೊಳ್ಳುವಂತೆ ಸರಕಾರ ಗಮನಹರಿಸಬೇಕು. ಇದಲ್ಲದೆ ನೀರಿನ ಮಿತವಾದ ಬಳಕೆಯೂ ಸಮಸ್ಯೆಯ ನಿವಾರಣೆಗೆ ಸಹಕಾರಿಯಾಗಬಲ್ಲುದು.
     ಮುಂದೆ ಮಳೆ ಕಡಿಮೆಯಾದಂತೆ ಕೆರೆಯ ನೀರನ್ನು ನಿತ್ಯ ಉಪಯೋಗಗಳಿಗೆ ಬಳಸಬೇಕಾಗುತ್ತದೆ. ಇಂದು ಬಹುತೇಕ ಕೆರೆ, ನದಿಗಳು ಹೂಳಿನಿಂದ ತುಂಬಿಹೋಗಿವೆ. ಹಾಗಾಗಿ ಅಲ್ಲಿ ಹೆಚ್ಚಿನ ನೀರು ಶೇಖರಣೆಯಾಗುವುದಿಲ್ಲ. ಕೆರೆಗಳ ಹೂಳೆತ್ತಿದರೆ ಸುಮಾರು 70% ನೀರಿನ ಸಮಸ್ಯೆ ಕಡಿಮೆಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಹಾಗಾಗಿ ಸಂಬಂಧಪಟ್ಟವರು ಕೆರೆಗಳ ಹೂಳೆತ್ತುವ ಕೆಲಸವನ್ನು ಸಮರ್ಪಕವಾಗಿ ಮಾಡಬೇಕು.
     ಒಂದೆಡೆ ಮಳೆಗಾಲ ನೀರಿನ ಸಮಸ್ಯೆಗೆ ಪರಿಹಾರವಾದರೆ ಸಮುದ್ರ ತೀರದ ಜನರಿಗೆ ಅದೇ ಮಳೆಗಾಲ ಕಡಲ್ಕೊರೆತದ ಸಮಸ್ಯೆ ತಂದಿಡುತ್ತದೆ. ಪ್ರತೀವರ್ಷ ಕಡಲ್ಕೊರೆತದ ಸಮಸ್ಯೆ ಎದುರಾದಾಗ ಅಲ್ಲಲ್ಲಿ ಹಾಕುವ ಬಂಡೆಗಳು, ಮರಳು ಚೀಲಗಳು ಸಮುದ್ರಗರ್ಭವನ್ನು ಸೇರುತ್ತವೆ. ಇವುಗಳಿಗೆ ಶಾಶ್ವತ ಪರಿಹಾರ ಬೇಕು. ಹಾಗಾಗಿ ವಿದೇಶಗಳಲ್ಲಿ ಬಳಸುವ ವೈಜ್ಞಾನಿಕ ವಿಧಾನಗಳನ್ನು ಬಳಸಲು ಸರಕಾರ ಮುಂದಾಗಬೇಕು. ಇದಕ್ಕಾಗಿ ಬಜೆಟ್ ನಲ್ಲಿ ಇಂತಿಷ್ಟೇ ಹಣವನ್ನು ಮೀಸಲಾಗಿರಿಸಲು ನಮ್ಮ ಪ್ರತಿನಿಧಿಗಳು ಪ್ರಯತ್ನಿಸಬೇಕು. ಹಾಗಾದರೆ ಮಾತ್ರ ಇದಕ್ಕೊಂದು ಪರಿಹಾರ ಸಾಧ್ಯ.
      ಒಟ್ಟಾರೆಯಾಗಿ ಹೇಳುವುದಾದರೆ  ದೂರದೃಷ್ಟಿಯ ಕೊರತೆ, ಸಮಸ್ಯೆಯನ್ನು ಸರಿಯಾಗಿ ಗುರುತಿಸದೇ ಇರುವುದು ನಮ್ಮನಾಳುವವರ ದೊಡ್ಡ ಸಮಸ್ಯೆ. ತಾತ್ಕಾಲಿಕ ಪರಿಹಾರ ಕೇವಲ ಕೆಲವೇ ಸಮಯದ  ಉಪಶಮನ  ಮಾತ್ರ. ಸಮಸ್ಯೆ ತೀವ್ರವಾದಾಗ ಎಚ್ಚತ್ತುಕೊಳ್ಳುವ ಬದಲು ಮುನ್ನೆಚ್ಚರಿಕೆ ವಹಿಸಿ ಅಗತ್ಯ ಕ್ರಮ ಕೈಗೊಂಡರೆ ಸರಕಾರಕ್ಕೂ ಒಳಿತು ಜನರಿಗೂ ಒಳಿತು.