ಮಂಗಳವಾರ, ಜುಲೈ 3, 2012

ನೀರು, ಕಡಲ್ಕೊರೆತ – ಶಾಶ್ವತ ಪರಿಹಾರ ಬೇಕು

ಮಳೆಗಾಲ ಆರಂಭವಾಗಿದೆ. ನಿನ್ನೆ ಮೊನ್ನೆಯವರೆಗಿದ್ದ ‘ನೀರಿನ ಬರ’ ದ ಸಮಸ್ಯೆ ಉಡುಪಿ, ದ.ಕ. ಜಿಲ್ಲೆಗಳಲ್ಲಿ ಬಹುತೇಕ ಮಾಯವಾಗಿದೆ. ಕಳೆದ ಹಲವಾರು ವರ್ಷಗಳಿಂದ ಕರಾವಳಿಯ ಜನತೆ ಈ ರೀತಿಯ ಬರ ಎದುರಿಸಿರಲಿಲ್ಲ. ಆದುದರಿಂದ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಕಂಗೆಡುವ ಪರಿಸ್ಥಿತಿ ಎದುರಾಗಿತ್ತು. ಆದರೆ ಕೊಂಚ ತಡವಾದರೂ ಜೋರಾಗಿ  ಆಗಮಿಸಿದ ಮುಂಗಾರು ಸದ್ಯಕ್ಕೆ ಈ ಸಮಸ್ಯೆಗೆ ಬ್ರೇಕ್ ಹಾಕಿದೆ.
     ಪ್ರತೀವರ್ಷ ಉತ್ತರ ಕರ್ನಾಟಕದ ಜನತೆ ಬರದ ಸಮಸ್ಯೆ ಎದುರಿಸುತ್ತಾರೆ. ಅಲ್ಲಿ ಬೀಳುವ ಮಳೆಯ ಪ್ರಮಾಣವೂ ಕಮ್ಮಿ ಹಾಗಾಗಿ ಅದು ನಿರೀಕ್ಷಿತ. ಆದರೆ ಕರಾವಳಿಯಲ್ಲಿ ಮಳೆಯಿಂದ ಅಂತಹಾ ಮೋಸವೇನೂ ಆಗಿಲ್ಲ.ಕಳೆದ ವರ್ಷ ಉತ್ತಮ ಮಳೆಯಾಗಿತ್ತು. ಆದರೂ ಈ ವರ್ಷ ಬರದ ಸಮಸ್ಯೆ ಜನರನ್ನು ಕಾಡಿದೆ. ಮಳೆ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ತರಬಹುದು ಆದರೆ ಶಾಶ್ವತ ಪರಿಹಾರದತ್ತ ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ.
     ಕರಾವಳಿ ಜಿಲ್ಲೆಗಳಲ್ಲಿ ಬರ ಉಂಟಾಗಲು ಪ್ರಮುಖವಾಗಿ ಎರಡು ಕಾರಣಗಳಿವೆ. ಒಂದು ಅಂತರ್ಜಲ ಸಮಸ್ಯೆ ಮತ್ತೊಂದು ಹೂಳು ತುಂಬಿದ ಕೆರೆ ಹಾಗೂ ನದಿಗಳು.ಅಂತರ್ಜಲ ಸಮಸ್ಯೆ ನಮ್ಮ ಬಾವಿಗಳನ್ನು ಬೇಗನೆ ಇಂಗುವಂತೆ ಮಾಡುತ್ತವೆ. ಅವೈಜ್ಞಾನಿಕ ರೀತಿಯಲ್ಲಿ ಬೋರವೆಲ್ ಗಳನ್ನು ತೋಡುವುದು ಕೂಡಾ ಈ ಸಮಸ್ಯೆಗೆ ಕಾರಣ. ಹಾಗಾಗಿ ಅಂತರ್ಜಲ ಸಂರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಜಲ ಮರುಪೂರಣ ವ್ಯವಸ್ಥೆ ಮಾಡಬೇಕು. ಮಳೆನೀರು ಕೊಯ್ಲು , ಇಂಗುಗುಂಡಿಗಳ ನಿರ್ಮಾಣ ಮುಂತಾದ ಕಾರ್ಯಗಳು ಇನ್ನಷ್ಟು ಬಲಗೊಳ್ಳುವಂತೆ ಸರಕಾರ ಗಮನಹರಿಸಬೇಕು. ಇದಲ್ಲದೆ ನೀರಿನ ಮಿತವಾದ ಬಳಕೆಯೂ ಸಮಸ್ಯೆಯ ನಿವಾರಣೆಗೆ ಸಹಕಾರಿಯಾಗಬಲ್ಲುದು.
     ಮುಂದೆ ಮಳೆ ಕಡಿಮೆಯಾದಂತೆ ಕೆರೆಯ ನೀರನ್ನು ನಿತ್ಯ ಉಪಯೋಗಗಳಿಗೆ ಬಳಸಬೇಕಾಗುತ್ತದೆ. ಇಂದು ಬಹುತೇಕ ಕೆರೆ, ನದಿಗಳು ಹೂಳಿನಿಂದ ತುಂಬಿಹೋಗಿವೆ. ಹಾಗಾಗಿ ಅಲ್ಲಿ ಹೆಚ್ಚಿನ ನೀರು ಶೇಖರಣೆಯಾಗುವುದಿಲ್ಲ. ಕೆರೆಗಳ ಹೂಳೆತ್ತಿದರೆ ಸುಮಾರು 70% ನೀರಿನ ಸಮಸ್ಯೆ ಕಡಿಮೆಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಹಾಗಾಗಿ ಸಂಬಂಧಪಟ್ಟವರು ಕೆರೆಗಳ ಹೂಳೆತ್ತುವ ಕೆಲಸವನ್ನು ಸಮರ್ಪಕವಾಗಿ ಮಾಡಬೇಕು.
     ಒಂದೆಡೆ ಮಳೆಗಾಲ ನೀರಿನ ಸಮಸ್ಯೆಗೆ ಪರಿಹಾರವಾದರೆ ಸಮುದ್ರ ತೀರದ ಜನರಿಗೆ ಅದೇ ಮಳೆಗಾಲ ಕಡಲ್ಕೊರೆತದ ಸಮಸ್ಯೆ ತಂದಿಡುತ್ತದೆ. ಪ್ರತೀವರ್ಷ ಕಡಲ್ಕೊರೆತದ ಸಮಸ್ಯೆ ಎದುರಾದಾಗ ಅಲ್ಲಲ್ಲಿ ಹಾಕುವ ಬಂಡೆಗಳು, ಮರಳು ಚೀಲಗಳು ಸಮುದ್ರಗರ್ಭವನ್ನು ಸೇರುತ್ತವೆ. ಇವುಗಳಿಗೆ ಶಾಶ್ವತ ಪರಿಹಾರ ಬೇಕು. ಹಾಗಾಗಿ ವಿದೇಶಗಳಲ್ಲಿ ಬಳಸುವ ವೈಜ್ಞಾನಿಕ ವಿಧಾನಗಳನ್ನು ಬಳಸಲು ಸರಕಾರ ಮುಂದಾಗಬೇಕು. ಇದಕ್ಕಾಗಿ ಬಜೆಟ್ ನಲ್ಲಿ ಇಂತಿಷ್ಟೇ ಹಣವನ್ನು ಮೀಸಲಾಗಿರಿಸಲು ನಮ್ಮ ಪ್ರತಿನಿಧಿಗಳು ಪ್ರಯತ್ನಿಸಬೇಕು. ಹಾಗಾದರೆ ಮಾತ್ರ ಇದಕ್ಕೊಂದು ಪರಿಹಾರ ಸಾಧ್ಯ.
      ಒಟ್ಟಾರೆಯಾಗಿ ಹೇಳುವುದಾದರೆ  ದೂರದೃಷ್ಟಿಯ ಕೊರತೆ, ಸಮಸ್ಯೆಯನ್ನು ಸರಿಯಾಗಿ ಗುರುತಿಸದೇ ಇರುವುದು ನಮ್ಮನಾಳುವವರ ದೊಡ್ಡ ಸಮಸ್ಯೆ. ತಾತ್ಕಾಲಿಕ ಪರಿಹಾರ ಕೇವಲ ಕೆಲವೇ ಸಮಯದ  ಉಪಶಮನ  ಮಾತ್ರ. ಸಮಸ್ಯೆ ತೀವ್ರವಾದಾಗ ಎಚ್ಚತ್ತುಕೊಳ್ಳುವ ಬದಲು ಮುನ್ನೆಚ್ಚರಿಕೆ ವಹಿಸಿ ಅಗತ್ಯ ಕ್ರಮ ಕೈಗೊಂಡರೆ ಸರಕಾರಕ್ಕೂ ಒಳಿತು ಜನರಿಗೂ ಒಳಿತು.